ಜಿಲ್ಲೆ

ಚನ್ನಮ್ಮ ವೃತ್ತದ ಅಂದ ಹಾಳಾಗದಿರಲಿ,  ಸಭಾಪತಿ ಬಸವರಾಜ ಹೊರಟ್ಟಿ ಪತ್ರ

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಅವಳಿನಗರ ಎಂದ ತಕ್ಷಣ ನೆನಪಾಗುವುದು ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾದ ವಾಣಿಜ್ಯನಗರಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್. ಇದು ಮಹಾನಗರದ ಪ್ರಮುಖ ಆಕರ್ಷಣೀಯ ಸ್ಥಳವೂ ಹೌದು.

ಆದರೆ, ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಚನ್ನಮ್ಮ ಸರ್ಕಲ್ ನಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುತ್ತಿರುವುದರಿಂದ ಇದರ ಆಕರ್ಷಣೆಗೆ ಕುಂದು ಬರುತ್ತಿದೆ. ಪ್ರಸ್ತುತ ಫ್ಲೈ ಓವರ್ ಎತ್ತರದಲ್ಲಿದ್ದು ಮೂರ್ತಿಯು ಕೆಳಹಂತದಲ್ಲಿದೆ. ಇದರಿಂದ ಈ ವೃತ್ತದ ಅಂದವೇ ಹಾಳಾಗಿ ಹೋಗುತ್ತದೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ಅವರಿಗೆ ಅಗೌರವ ತೋರಿದಂತಾಗುತ್ತದೆ.

ಆದ್ದರಿಂದ ಈ ಫ್ಲೈ ಓವರ್ ನಿರ್ಮಾಣ ಮಾಡುವುದರ ಜೊತೆಗೆ ರಾಣಿ ಚನ್ನಮ್ಮ ಸರ್ಕಲ್ ನ ಅಂದ ಹಾಳಾಗದಂತೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ಅವರಿಗೆ ಅಗೌರವ ಆಗದಂತೆ ನೋಡಿಕೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ನಾಡು ನುಡಿಗಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ರಾಣಿ ಚನ್ನಮ್ಮಳು ಧೈರ್ಯ ಮತ್ತು ಸಾಹಸದ ಸಂಕೇತವಾಗಿದ್ದಾಳೆ. ಇಂತಹ ವೀರ ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ನಿರ್ಮಿಸಿರುವ ಪುತ್ಥಳಿಯ ಮಾದರಿಯಲ್ಲಿಯೇ ಇಲ್ಲಿಯೂ ಕೂಡ ನಿರ್ಮಿಸಿ ಕಾಮಗಾರಿಯನ್ನು ನಡೆಸಬೇಕು ಎಂಬುದು ಎಲ್ಲರ ಅಭಿಪ್ರಾಯ ಎಂದು ತಿಳಿಸಿದ್ದಾರೆ.