ಜಿಲ್ಲೆ

ಹುಬ್ಬಳ್ಳಿ ಯೋಗಾಸಕ್ತರಿಗೆ ಸ್ಪೂರ್ತಿ ತುಂಬಿದ ಬಾಬಾ ರಾಮದೇವ್ | ಐದು ದಿನಗಳ ಮಹಾ ಯೋಗಯಜ್ಞಕ್ಕೆ ತೆರೆ

ಹುಬ್ಬಳ್ಳಿ: ನಗರದಲ್ಲಿ ಐದು ದಿನಗಳಿಂದ ನಡೆದ ಮಹಾ ‘ಯೋಗ’ಯಜ್ಞಕ್ಕೆ ಸೋಮವಾರ ತೆರೆ ಬಿತ್ತು. ವಿಶ್ವವಿಖ್ಯಾತ ಯೋಗ ಗುರು ಬಾಬಾ ರಾಮದೇವ್ ನಿತ್ಯವೂ ಸಹಸ್ರಾರು ಯೋಗಾಸಕ್ತರಿಗೆ ಮಾರ್ಗದರ್ಶನ ನೀಡಿ ಸ್ಪೂರ್ತಿ ತುಂಬುವುದರೊಂದಿಗೆ ಯೋಗ ಶಿಬಿರ ಅದ್ಭುತ ಯಶಸ್ಸು ಕಂಡಿತು. ವಾಣಿಜ್ಯನಗರಿ ಐದು ದಿನಗಳ ಕಾಲ ಸಂಪೂರ್ಣ ಯೋಗಮಯವಾಗಿತ್ತು.

ವಿಆರ್​ಎಲ್ ಲಾಜಿಸ್ಟಿಕ್ಸ್, ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 247 ನ್ಯೂಸ್, ಪವರ್ ನ್ಯೂಸ್ ಆಪ್ ಹಾಗೂ ಪತಂಜಲಿ ಯೋಗಪೀಠದ ಆಶ್ರಯದಲ್ಲಿ ನಿತ್ಯ ಬೆಳಗ್ಗೆ 5 ರಿಂದ 7-30 ರವರೆಗೆ ರೈಲ್ವೆ ಮೈದಾನದಲ್ಲಿ ಉಚಿತವಾಗಿ ಯೋಗ ಶಿಬಿರ ನಡೆಯಿತು. ಶಿಬಿರಕ್ಕೆ ಕೊನೇ ದಿನವೂ ಜನಸಾಗರವೇ ಹರಿದು ಬಂದಿತ್ತು. ಆರೋಗ್ಯ, ರೋಗಮುಕ್ತಿ, ಸದೃಢ ಸಮಾಜ ಮತ್ತು ದೇಶ ನಿರ್ವಣ, ಸ್ವದೇಶಿ ಚಿಂತನೆ, ಸ್ವಾವಲಂಬನೆ, ಧಾರ್ವಿುಕತೆ, ಕರ್ತವ್ಯ ಜಾಗೃತಿಗೆ ಸಂಬಂಧಿಸಿ ಹಲವಾರು ಸಂಗತಿಗಳನ್ನು ಹೇಳುತ್ತ, ಮಧ್ಯೆ ಮಧ್ಯೆ ತಿಳಿ ಹಾಸ್ಯದ ಅಲೆಯೆಬ್ಬಿಸುತ್ತ ಹಲವು ಯೋಗಾಸನ, ಪ್ರಾಣಾಯಾಮಗಳನ್ನು ಲೀಲಾಜಾಲವಾಗಿ ಕಲಿಸಿಕೊಡುವ ಮೂಲಕ ಮೋಡಿ ಮಾಡಿದ ಬಾಬಾ ರಾಮದೇವ್ ಯೋಗಮಯ ವಾತಾವರಣವನ್ನೇ ನಿರ್ವಿುಸಿದ್ದರು.
ಮಕ್ಕಳು ಹಾಗೂ ಮಹಿಳೆಯರಿಗಾಗಿ ಸೋಮವಾರ ಸಂಜೆ ಆಯೋಜಿಸಿದ್ದ ವಿಶೇಷ ಯೋಗ ಶಿಬಿರವನ್ನು ವಿಆರ್​ಎಲ್ ಲಾಜಿಸ್ಟಿಕ್ಸ್ ಪ್ರೆಸಿಡೆಂಟ್ ವಾಣಿ ಆನಂದ ಸಂಕೇಶ್ವರ ಉದ್ಘಾಟಿಸಿದರು. ಸ್ನೇಹಾ ಪ್ರದೀಪ ಶೆಟ್ಟರ್, ಅಕ್ಕಮ್ಮ ದೇವಿ, ವಜ್ರೇಶ್ವರಿ ಲದವಾ ಇನ್ನಿತರರು ಇದ್ದರು.

 ಬಾಬಾ ಜತೆ ಯೋಗ ಕಲಿತ ಶಾಲಾ ಮಕ್ಕಳು: ಶಿಬಿರದಲ್ಲಿ ಸೋಮವಾರ ಸಂಜೆಯ ಅವಧಿ ಶಾಲಾ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಮೀಸಲಾಗಿತ್ತು. ಬಾಬಾ ರಾಮದೇವ್ ಸಮ್ಮುಖದಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಕಲಿತು ಸಂಭ್ರಮಿಸಿದರು.

ಹು-ಧಾ ಅವಳಿ ನಗರ, ಜಿಲ್ಲೆಯ ವಿವಿಧೆಡೆಯ ಗ್ರಾಮೀಣ ಭಾಗದಿಂದ ಬಂದಿದ್ದ 61 ಶಾಲೆಗಳ 4500ಕ್ಕೂ ಅಧಿಕ ವಿದ್ಯಾರ್ಥಿಗಳು 2 ಗಂಟೆಗಳ ಕಾಲ ಯೋಗ ಕಲಿತರು. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸಲು, ನೆನನಪಿನ ಶಕ್ತಿ ಹೆಚ್ಚಲು, ಬುದ್ಧಿ ವಿಕಾಸಕ್ಕೆ ಪೂರಕವಾದ ಆಸನಗಳನ್ನು ಯೋಗ ಗುರು ಮಾಡಿಸಿದರು. ಓಂಕಾರ ಜಪ, ಗಾಯತ್ರಿ ಮಂತ್ರವನ್ನು ಹೇಳಿಕೊಟ್ಟು ನಿತ್ಯ 3 ಬಾರಿ ಮಾಡಬೇಕು ಎಂದರು. ಪ್ರಾಣಾಯಾಮ, ದೀರ್ಘ ಉಸಿರಾಟ, ಕಪಾಲಬಾತಿ, ಅನುಲೋಮ-ವಿಲೋಮ ಹೇಳಿಕೊಟ್ಟರು. ಸರ್ವಾಂಗಾಸನ, ಹಲಾಸನ, ಚಕ್ರಾಸನ, ಶೀರ್ಷಾಸನ, ಪಶ್ಚಿಮೋತ್ತಾಸನ, ಗರುಢಾಸನ, ಸೂರ್ಯ ನಮಸ್ಕಾರ, ವೃಕ್ಷಾಸನ, ಓಂಕಾರಾಸನ ಮಾಡಿಸಿದರು. ಇವುಗಳಲ್ಲಿ 5 ಆಸನಗಳನ್ನು ಮಕ್ಕಳು ತಪ್ಪದೇ ಮಾಡಬೇಕು ಎಂದು ಬಾಬಾ ರಾಮದೇವ್ ಹೇಳಿದರು.

ಮಹಿಳೆಯರನ್ನು ಹೆಚ್ಚಾಗಿ ಕಾಡುವ ಬೆನ್ನುನೋವು, ಬೊಜ್ಜು, ತಲೆ ನೋವು, ಮುಟ್ಟಿನ ನೋವು, ಖಿನ್ನತೆ, ಆತಂಕ, ಅಶಕ್ತತೆಗೆ ಪರಿಹಾರವಾಗಿ ಇರುವ ಆಸನಗಳನ್ನು ಬಾಬಾ ರಾಮದೇವ್ ಹೇಳಿಕೊಟ್ಟರು. ಸಂಜೆಯಾಗುತ್ತಿದ್ದಂತೆ ಶಾಲಾ ಮಕ್ಕಳನ್ನು ಕಳಿಸಿಕೊಟ್ಟು ಮಹಿಳೆಯರಿಗೆ ಪ್ರತ್ಯೇಕವಾಗಿ ಯೋಗಾಸನ ಕಲಿಸಿದರು.

ಇದಕ್ಕೂ ಮುನ್ನ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಯೋಜಿಸಿದ್ದ ವಿಶೇಷ ಯೋಗ ಶಿಬಿರಕ್ಕೆ ವಿಆರ್​ಎಲ್ ಲಾಜಿಸ್ಟಿಕ್ಸ್​ನ ಪ್ರೆಸಿಡೆಂಟ್ ವಾಣಿ ಆನಂದ ಸಂಕೇಶ್ವರ ಚಾಲನೆ ನೀಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಡಿಡಿಪಿಐ ಎಂ.ಎಲ್. ಹಂಚಾಟೆ, ಬಿಇಒ ಶ್ರೀಶೈಲ ಕರಿಕಟ್ಟಿ, ಸ್ನೇಹಾ ಪ್ರದೀಪ ಶೆಟ್ಟರ್, ಸಾಧ್ವಿ ದೇವಪ್ರಿಯಾ, ಅಕ್ಕಮ್ಮ ದೇವಿ, ವಜ್ರೇಶ್ವರಿ ಲದವಾ ಇನ್ನಿತರರು ಇದ್ದರು.

ಪತಂಜಲಿ ಫ್ಯಾಕ್ಟರಿಗೆ ಆಹ್ವಾನ : ಹುಬ್ಬಳ್ಳಿಯಲ್ಲಿ ಪತಂಜಲಿ ಫ್ಯಾಕ್ಟರಿ ಆರಂಭಿಸುವ ಕುರಿತು ಚರ್ಚೆ ಶುರುವಾಗಿದ್ದು, ಬಾಬಾ ರಾಮದೇವ್ ಅವರು ಪತಂಜಲಿ ಫ್ಯಾಕ್ಟರಿ ಆರಂಭಿಸಲಿ. ಹುಬ್ಬಳ್ಳಿಗೆ ಪತಂಜಲಿ ‘ಬಾ ಬಾ’ ಎಂದು ಆಹ್ವಾನಿಸುತ್ತೇವೆಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಮನವಿ ಮಾಡಿದರು. ಐದನೇ ದಿನದ ಯೋಗ ಶಿಬಿರದಲ್ಲಿ ಮಾತನಾಡಿದ ಅವರು, ಚೀನಾದಲ್ಲಿ

ಅಲಿಬಾಬಾ ಬಿಜಿನೆಸ್ ಐಕಾನ್ ಆಗಿದ್ದಾರೆ. ಅದೇ ರೀತಿ ಭಾರತದಲ್ಲಿ ಬಾಬಾ ರಾಮದೇವ್ ಸ್ವದೇಶಿ ಬಿಜಿನೆಸ್ ಐಕಾನ್ ಆಗಿದ್ದಾರೆ. ಹಾಗಾಗಿ, ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿ ಆರಂಭಿಸಲಿ ಎಂದು ವಿನಂತಿಸಿದರು. ಹತ್ತು ವರ್ಷಗಳ ಹಿಂದೆ ಆರಂಭವಾದ ಪತಂಜಲಿ 24 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿದೆ. ಭಾರತದಲ್ಲಿ 1200 ಪತಂಜಲಿ ಚಿಕಿತ್ಸಾಲಯಗಳಿವೆ. 2500 ಆರೋಗ್ಯ ಕೇಂದ್ರಗಳಿವೆ. 8000 ಸ್ವದೇಶಿ ಕೇಂದ್ರಗಳಿವೆ. ಮುಂದಿನ 2 ವರ್ಷದಲ್ಲಿ 50 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ದಾಟುವ ಗುರಿ ಹೊಂದಿದ್ದಾರೆ. ಈಗಾಗಲೇ 10 ಸಾವಿರ ಕೋಟಿ ರೂ. ದಾನ ನೀಡಿದ್ದಾರೆ. ಭವಿಷ್ಯದಲ್ಲಿ 1 ಲಕ್ಷ ಕೋಟಿ ರೂ. ದಾನ ಮಾಡುವ ಕನಸು ಹೊಂದಿದ್ದಾರೆ ಎಂದು ವಿವರಿಸಿದರು. ಯೋಗ ಶಿಬಿರದ ಯಶಸ್ಸಿಗೆ ಸಹಕರಿಸಿದ ಪೊಲೀಸ್ ಇಲಾಖೆ, ಆಸ್ತಾ ಟಿವಿ, ವಿವಿಧ ಮಾಧ್ಯಮ, ಪತ್ರಿಕೆಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.