ಜಿಲ್ಲೆ

1.5 ವರ್ಷದಲ್ಲಿ ಟ್ರಕ್ ಟರ್ವಿುನಲ್ ಪೂರ್ಣ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ ಟ್ರಕ್ ಟರ್ವಿುನಲ್ ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್​ನ 33ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ರಾಜ್ಯಮಟ್ಟದ ಲಾರಿ ಮಾಲೀಕರ ಮತ್ತು ಸರಕು ಸಾಗಣೆದಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಟ್ರಕ್ ಟರ್ವಿುನಲ್ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭ ಮಾಡುತ್ತೇವೆ ಎಂದರು.

ಅನಾವಶ್ಯಕ ತಡೆ: ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ನವೀನ ರೆಡ್ಡಿ ಮಾತನಾಡಿ, ಹೆದ್ದಾರಿಗಳಲ್ಲಿ ಆರ್​ಟಿಒ ಹಾಗೂ ಪೊಲೀಸ್ ಅಧಿಕಾರಿಗಳು ಲಾರಿಗಳನ್ನು ಅನವಶ್ಯಕವಾಗಿ ತಡೆಯುತ್ತಾರೆ. ಮೇಲಾಗಿ ಜಿಎಸ್​ಟಿ ಅಧಿಕಾರಿಗಳ ಕಾಟ ವಿಪರೀತವಾಗಿದೆ. ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಅನೇಕ ಲಾರಿ ಮಾಲೀಕರ ಜೀವನ ಹಾಳಾಗಿದೆ ಎಂದರು.

ಸಿಪಿಐ (ಸಂಚಾರ) ಮರುಳಸಿದ್ದಪ್ಪ ಆರ್.ಡಿ. ಮಾತನಾಡಿ, ಲಾರಿ ಮಾಲೀಕರು ನಿಯಮಿತವಾಗಿ ಚಾಲಕರ ಆರೋಗ್ಯ ತಪಾಸಣೆ ಮಾಡಿಸಬೇಕು. ಅದರಲ್ಲೂ ಪ್ರತಿ 6 ತಿಂಗಳಿಗೊಮ್ಮೆ ನೇತ್ರ ತಪಾಸಣೆ ಕಡ್ಡಾಯವಾಗಿ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ವಣದಲ್ಲಿ ಗಮನಾರ್ಹ ಸುಧಾರಣೆ ಕಂಡರೂ ಶೇ. 70 ರಷ್ಟು ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿವೆ. ಇದಕ್ಕೆ ಅತಿ ವೇಗದ ಚಾಲನೆ ಹಾಗೂ ಚಾಲನೆ ವೇಳೆ ಚಾಲಕರು ಲೇನ್ ಶಿಸ್ತು ಕಾಪಾಡಿಕೊಳ್ಳದಿರುವುದು ಕಾರಣವಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಸರಕು ಸಾಗಾಣಿಕೆ ಮತ್ತು ಲಾರಿ ಮಾಲೀಕರು ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಬೆಳಂಕರ ಮಾತನಾಡಿ, ದೇಶದಲ್ಲಿ ಪ್ರತಿ ತಿಂಗಳು 80ರಿಂದ 90 ಸಾವಿರ ಸರಕು ಸಾಗಣೆ ವಾಹನಗಳು ಮಾರಾಟವಾಗುತ್ತಿವೆ. ವಾಹನ ಖರೀದಿಗೆ ಫೈನಾನ್ಸ್ ಕಂಪನಿಗಳು ಶೇ. 100 ರಷ್ಟು ಪ್ರಮಾಣದಲ್ಲಿ ಸಾಲ ನೀಡುತ್ತಿರುವುದು ಇದಕ್ಕೆ ಕಾರಣ. ಸಾಲ ನೀಡಿಕೆಯ ಪ್ರಮಾಣವನ್ನು ಶೇ. 75ಕ್ಕೆ ಮಿತಿಗೊಳಿಸಬೇಕು. ಈ ಕುರಿತು ರಾಜ್ಯ ಸರ್ಕಾರ ಕಾನೂನು ರಚಿಸಬೇಕು ಎಂದು ಸಲಹೆ ನೀಡಿದರು.

ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಗೈಬುಸಾಬ ಹೊನ್ಯಾಳ, ಜಿ. ನಾರಾಯಣಪ್ರಸಾದ, ಖಜಾಂಚಿ ಗೌಸ್ ಮುಲ್ಲಾ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ, ಮೋಹನ ಅಸುಂಡಿ, ಎಚ್.ಎಸ್. ಸಂಜಯಕುಮಾರ, ವಾಸು ಕೋನರಡ್ಡಿ, ಕೆ.ಎಸ್. ಚಂದ್ರಶೇಖರ, ಚನ್ನಪ್ರಸನ್ನ ಕುಮಾರ ಇತರರು ಇದ್ದರು.