ಹುಬ್ಬಳ್ಳಿ: ರಂಗಪಂಚಮಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸಂಭ್ರಮ ಮನೆ ಮಾಡಿದ್ದು, ಬಣ್ಣ ಖರೀದಿ ಪ್ರಕ್ರಿಯೆ ಜೋರಾಗಿದೆ.
ಇಲ್ಲಿಯ ದುರ್ಗದಬೈಲ್, ಬಟರ್‌ಮಾರ್ಕೆಟ್, ಜನತಾ ಬಜಾರ್ ಸೇರಿ ವಿವಿಧೆಡೆ ಜನರು ಬಣ್ಣ, ಪಿಚಕಾರಿ, ಬಣ್ಣದವಾಡುವ ಪಿಸ್ತೂಲ್‌ಗಳನ್ನು ಖರೀದಿಸಿದರು.
ಕಳೆದ ಬಾರಿಗಿಂತ ಈ ಬಾರಿ ಬಣ್ಣ ಹಾಗೂ ಬಣ್ಣದಾಟವಾಡುವ ಸಾಮಗ್ರಿಗಳ ಬೆಲೆ ತುಸು ದುಬಾರಿಯಾಗಿದ್ದರೂ ಜನರು ಹಿಂದೇಟು ಹಾಕುತ್ತಿಲ್ಲ. ರಂಗಪಂಚಮಿ ಜೋರಾಗಿ ಆಡಬೇಕೆಂಬ ನಿರ್ಧಾರ ತಳೆದಂತಿತ್ತು.
ರತಿ-ಮನ್ಮಥರ ಮೂರ್ತಿ: ನಗರದ ವಿವಿಧೆಡೆ ಒಟ್ಟು 450ಕ್ಕೂ ಹೆಚ್ಚು ಸಾರ್ವಜನಿಕ ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ಮ್ಯಾದಾರ ಓಣಿಯ ಕಾಮಣ್ಣನ ಮೂರ್ತಿ 22 ಅಡಿ ಎತ್ತರವಿದ್ದು, ಬಹು ಆಕರ್ಷಕದಿಂದ ಕೂಡಿದೆ.
ಕಸಬಾಪೇಟೆ, ಕಮರಿಪೇಟೆ, ಹಳೇ ಹುಬ್ಬಳ್ಳಿ, ಘಂಟಿಕೇರಿ, ಉಪನಗರ ಹಾಗೂ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ. ಹು-ಧಾ ಮಾತ್ರವಲ್ಲ, ಹೊರ ಜಿಲ್ಲೆಯಿಂದಲೂ ಬಣ್ಣದಾಟವಾಡಲು ಜನರು ಬರುವ ಸಾಧ್ಯತೆ ಇದೆ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿಸುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 2500 ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.
ಪಥ ಸಂಚಲನ: ರಂಗಪಂಚಮಿ ಹಾಗೂ ರಂಜಾನ್ ಒಟ್ಟೊಟ್ಟಿಗೆ ಆಗಮಿಸಿದ್ದರ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ನೇತೃತ್ವದಲ್ಲಿ ಪೊಲೀಸರು ನಗರದ ವಿವಿಧೆಡೆ ಸೋಮವಾರ ಆಕರ್ಷಕ ಪಥ ಸಂಚಲನ ನಡೆಸಿದರು.