ಹುಬ್ಬಳ್ಳಿ: ಶಿಕ್ಷಕರು ಬದಲಾವಣೆಗೆ ತಕ್ಕ ಹಾಗೆ ಬದಲಾಗಬೇಕು. ಇಲ್ಲದಿದ್ದರೆ ಬದಲಾವಣೆಯೇ ನಮ್ಮನ್ನು ಬದಲು ಮಾಡುತ್ತದೆ. ಶಿಕ್ಷಕ ಯಾವುದಾದರೂ ಕೆಲಸ ಮಾಡುವ ಯಾರೋ ಒಬ್ಬ ಮನುಷ್ಯನಲ್ಲ. ತನ್ನ ವ್ಯಕ್ತಿತ್ವ ರೂಪಿಸಿಕೊಂಡು ವಿದ್ಯಾರ್ಥಿಗಳ ಬದುಕಿನಲ್ಲೂ ಪರಿವರ್ತನೆ ಮಾಡುವ ಹರಿಕಾರ. ಅಂತಹ ಜ್ಞಾನ-ಕೌಶಲ-ಪರಿವರ್ತನೆ ಮಾಡುವ ಗುರುವಾಗಿದ್ದಾನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ ಆಡಿಟೋರಿಯಂನಲ್ಲಿ ಧಾರವಾಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ ಪ್ರಾಚಾರ್ಯರ ಸಂಘದ ವೆಬ್ಸೈಟ್ ಅನಾವರಣಗೊಳಿಸಿ ಮಾತನಾಡಿ, ಪ್ರತಿವರ್ಷ ಲಕ್ಷಾಂತರ ಇಂಜಿನಿಯರ್, ಪದವೀಧರರು ಹೊರಬರುತ್ತಿದ್ದಾರೆ. ಆದರೆ, ಶೇ. 80ರಷ್ಟು ಜನರು ಉದ್ಯೋಗ ತೆಗೆದುಕೊಳ್ಳುವ ಕೌಶಲಗಳನ್ನೇ ಹೊಂದಿಲ್ಲ. ಶೇ. 90ರಷ್ಟು ಉದ್ಯೋಗಗಳಿಗೆ ಕೌಶಲವೇ ಪ್ರಧಾನವಾಗಿದೆ ಎಂದರು.
ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ ಬೂದಿಹಾಳ, ಅಧ್ಯಕ್ಷ ಡಿ. ಹನುಮಂತಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಸಯ್ಯದ, ಆನಂದ ಮುಳಗುಂದ, ಎಫ್.ಬಿ. ಸೊರಟೂರ, ಲಿಂಗರಾಜ ಬೆಲ್ಲದ, ವಿಠ್ಠಲ ವಾಗ್ಮೊಡೆ, ಎಂ.ವಿ. ಹಡಪದ, ಕುಮಾರೇಶ ಮೇವುಂಡಿಮಠ ಉಪಸ್ಥಿತರಿದ್ದರು. ಪ್ರಾಚಾರ್ಯ ಜಿ.ಎಚ್. ಕಟ್ಟಿ ಹಾಗೂ ಎಲ್.ಎಲ್. ಲಮಾಣಿ ನಿರ್ವಹಿಸಿದರು.