ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ನಗರದ ಹಳೇ ಕೋರ್ಟ್ ವೃತ್ತದ ಬಳಿಯ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿಯಿಂದ ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ನಿರ್ವಿುಸುತ್ತಿರುವ ಅತ್ಯಾಧುನಿಕ ವೃದ್ಧಾಶ್ರಮಕ್ಕೆ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವೃದ್ಧಾಶ್ರಮದ ಮಾದರಿ ನೀಲಿನಕ್ಷೆ ಹಾಗೂ ಮಂದಿರದ ವೆಬ್ಸೈಟ್ ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷಾತೀತವಾಗಿ ಈ ಭಾಗದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಿಎಸ್ಆರ್ ಫಂಡ್ನಿಂದ ದೇಣಿಗೆ ನೀಡಲಾಗುವುದು. ಹಿರಿಯರ ಕಾಳಜಿ ಉದ್ದೇಶದಿಂದ ಉಚಿತವಾಗಿ ಆರೈಕೆ ಮಾಡುವ ಯೋಜನೆ ಉತ್ತಮವಾಗಿದೆ. ವೈಜ್ಞಾನಿಕವಾಗಿ ವೃದ್ಧಾಶ್ರಮ ನಿರ್ವಿುಸಬೇಕು. ನುರಿತ ವೈದ್ಯಕೀಯ ಸಿಬ್ಬಂದಿ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಇಂದಿನ ದಿನಗಳಲ್ಲಿ ಹಿರಿಯರ ಆರೈಕೆಗಾಗಿ ವೃದ್ಧಾಶ್ರಮಗಳು ಬೇಕು ಎಂಬ ಪರಿಸ್ಥಿತಿ ಉಂಟಾಗಿದೆ. ಸದ್ಭಕ್ತ ಮಂಡಳಿಯವರು ನಿರ್ವಿುಸುತ್ತಿರುವ ವೃದ್ಧಾಶಮ್ರದಲ್ಲಿ ಇರುವವರಿಗೆ ಸಕಲ ವ್ಯವಸ್ಥೆ ಮಾಡಬೇಕು. ಒಂದು ರೀತಿಯಲ್ಲಿ ಮನೆಯಲ್ಲಿ ಇರುವ ಭಾವ ಬರುವಂತಿರಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವೃದ್ಧಾಶ್ರಮ ನಿರ್ವಣಕ್ಕೆ 10 ಲಕ್ಷ ರೂ. ನೀಡುವುದರ ಜತೆಗೆ ಪಕ್ಷದ ಜನಪ್ರತಿನಿಧಿಗಳಿಂದ ಕೂಡ ಅನುದಾನ ಕೋಡಿಸುತ್ತೇನೆ ಎಂದರು.
ಶಿರಡಿ ಸಾಯಿ ಸದ್ಭಕ್ತ ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ಮಾತನಾಡಿ, ರಾಜ್ಯದಲ್ಲಿ ದೇವಸ್ಥಾನದ ವತಿಯಿಂದ ವೃದ್ಧಾಶ್ರಮ ಕಟ್ಟಿಸುತ್ತಿರುವುದು ನಾವೇ ಮೊದಲಿಗರು. ಈ ಕಾರ್ಯದಲ್ಲಿ ಹಲವು ಸವಾಲುಗಳಿದ್ದು, ಎಲ್ಲವನ್ನು ಮೀರಿ ವೃದ್ಧರ ಸೇವೆಗೆ ಸಿದ್ಧವಾಗಿದ್ದೇವೆ. 2 ಎಕರೆ ಜಾಗದಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ವೃದ್ಧಾಶ್ರಮ ನಿರ್ವಿುಸಲಾಗುತ್ತಿದೆ. ವೃದ್ಧರ ನಿರ್ವಹಣೆ ಖರ್ಚು ಭರಿಸಲು ಈಗಾಗಲೇ 25 ಭಕ್ತರು ಮುಂದೆ ಬಂದಿದ್ದಾರೆ ಎಂದರು.
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಉದ್ಯಮಿ ಪ್ರಕಾಶ ಬಾಫಣಾ, ನಾರಾಯಣ ನಿರಂಜನ, ಮಹೇಂದ್ರ ಸಿಂಘಿ, ಮಂಡಳಿಯ ಶರಣಪ್ಪ ದೇವನೂರ, ಬ್ರಜ ಮೋಹನ ಭುತಡಾ, ನರಸಿಂಗಸಾ ರತನ್, ಪಾಂಡುರಂಗ ಧೋಂಗಡಿ, ಪ್ರಕಾಶ ಚಳಗೇರಿ, ಪವಿತ್ರಾ ಕಡಪಟ್ಟಿ, ಪ್ರಿಯಾಂಕಾ ಕಠಾರೆ, ಗೋವಿಂದ ಕೋಟಕರ, ರಮೇಶ ಕಾಲಿರಾ, ಶಂಕ್ರಪ್ಪ ಯಲಿಗಾರ, ಮೋಹನ ಗಿರಡ್ಡಿ, ಬಸನಗೌಡ ಕಡ್ಲಿ, ಜಿ.ಎಸ್. ನಾಯಕ ಇತರರು ಇದ್ದರು. ರಾಜು ಬೊಂಗಾಳೆ ಕಾರ್ಯಕ್ರಮ ನಿರ್ವಹಿಸಿದರು.