ಜಿಲ್ಲೆ

ಹುಬ್ಬಳ್ಳಿ ಗಲಭೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

ಶಿವಮೊಗ್ಗ: ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ಪ್ರಕರಣ ರದ್ದುಪಡಿಸಿದ್ದಕ್ಕೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಿದವರನ್ನು ಕೇಸ್‌ನಿಂದ ಮುಕ್ತಗೊಳಿಸುವ ಹುನ್ನಾರವನ್ನು ಸರ್ಕಾರ ನಡೆಸಿತ್ತು. ಈ ಮೂಲಕ ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಮುಸ್ಲಿಮರ ಮೇಲಿನ ಕೇಸ್‌ಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಎಂಬುದು ಗೋಲಿ ಆಡುವ ತಂಡವಾ ಎಂದು ಪ್ರಶ್ನಿಸಿದ ಅವರು ರಾಷ್ಟ್ರಭಕ್ತರು, ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರ ಗೂಂಡಾಗಳನ್ನು ಬೆಳೆಸುತ್ತಿದೆ. ಮುಸ್ಲಿಮರ ಪರವಾಗಿಯೇ ಎಲ್ಲ ಸಚಿವರೂ ಧ್ವನಿ ಎತ್ತುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.