ಹುಬ್ಬಳ್ಳಿ: ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಧರ್ವಚರಣೆಯಿಂದ ಬದುಕಿಗೆ ಬಲ ಪ್ರಾಪ್ತಿಯಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಹಳೇಹುಬ್ಬಳ್ಳಿ ಹಿರೇಪೇಟೆಯ ಶ್ರೀ ಪಂಚಗೃಹ ಹಿರೇಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರಾವಣ ಪುರಾಣ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಹಗಲು ಸೂರ್ಯ ಬೆಳಕು ಕೊಡುತ್ತಾನೆ. ರಾತ್ರಿ ಚಂದ್ರ ಬೆಳಕು ಕೊಡುತ್ತಾನೆ. ಆದರೆ, ಸರ್ವ ಕಾಲಕ್ಕೂ ಸರ್ವ ಸಮುದಾಯಕ್ಕೂ ಧರ್ಮ ಬೆಳಕು ನೀಡುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಧಾರ್ವಿುಕ ಮತ್ತು ಸಾಮಾಜಿಕವಾಗಿ ಸತ್ಕ್ರಾಂತಿ ಉಂಟು ಮಾಡಿದ್ದನ್ನು ಮರೆಯಬಾರದು. ಒಂದು ತಿಂಗಳ ಕಾಲ ಹಳೇಹುಬ್ಬಳ್ಳಿ ಪಂಚಗೃಹ ಹಿರೇಮಠದ ನಿಯೋಜಿತ ಉತ್ತರಾಧಿಕಾರಿಗಳಾದ ರೇಣುಕ ಪ್ರಸಾದ ಅವರು ಪ್ರವಚನ ನೀಡಿ ಜಾಗೃತಿಯನ್ನು ಉಂಟು ಮಾಡಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು. ಬಳಿಕ ರೇಣುಕ ಪ್ರಸಾದ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಅವರಿಂದ ರಚಿತವಾದ ‘ಜೀವನ ದರ್ಶನ’ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.
ಸಮಾಜದ ಹಿರಿಯರಾದ ಬಸನಗೌಡ ಪಾಟೀಲ ಧರ್ಮ ಸಮಾರಂಭ ಉದ್ಘಾಟಿಸಿದರು. ಬಸವರಾಜ ಚಿಕ್ಕಮಠ, ಪ್ರಕಾಶ ಬೆಂಡಿಗೇರಿ, ಅಜ್ಜಪ್ಪ ಮಟ್ಟಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಮಾಡಿದ ರೇಣುಕ ಪ್ರಸಾದ ಮಾತನಾಡಿ, ಧಾರ್ವಿುಕ ಮೌಲ್ಯಗಳ ಪುನರುತ್ಥಾನದ ಅವಶ್ಯಕತೆಯಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಲೀಲೆ, ಪವಾಡಗಳು ಇಂದಿಗೂ ನಡೆಯುತ್ತಿವೆ. ನಮಗೆ ನಂಬಿಕೆ, ವಿಶ್ವಾಸ ಮುಖ್ಯ ಎಂದರು.
ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವೀರಶೈವ ಧರ್ಮ ಪ್ರಾಚೀನ ಧರ್ಮವಾಗಿದೆ. ತತ್ವ ತ್ರಯಗಳು ಜೀವನದ ವಿಕಾಸಕ್ಕೆ ಅಡಿಪಾಯವಾಗಿವೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ರೇಣುಕ ಪ್ರಸಾದ ಅವರಿಂದ ರೇಣುಕರ ಚಾರಿತ್ರ್ಯ ಕೇಳಿ ಧನ್ಯರಾಗಿದ್ದೀರಿ ಎಂದರು.
ವಿಶ್ವನಾಥ ಹಿರೇಗೌಡರ ಸ್ವಾಗತಿಸಿದರು. ಹಳೇಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪೂಜೆ ಸಲ್ಲಿಸಿದರು. ನಂತರ ಜಗದ್ಗುರುಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಗದಿಗೆಯ್ಯ ಹಿರೇಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.