ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಅತಿ ಅವಶ್ಯವಿದೆ. ಕಂಪ್ಯೂಟರ್ ಅರಿವು ಇರದವರನ್ನು ಅನಕ್ಷರಸ್ಥರೆಂದೇ ಭಾವಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನವನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ಮತ್ತು ಕಂಪ್ಯೂಟರ್ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳತ್ತಲೂ ವಿದ್ಯಾರ್ಥಿಗಳು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಪಿಯುಸಿ ಫಲಿತಾಂಶ ಉತ್ತಮವಾಗಿ ಬರಲು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಸಹ ಶ್ರಮಿಸಬೇಕು ಎಂದರು.
ಡಿಡಿಪಿಯು ಕೆ.ಪಿ. ಸುರೇಶ, ಪಾಲಿಕೆ ಸದಸ್ಯೆ ಸುನಿತಾ ಮಾಳೋದಕರ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಜ್ಜಪ್ಪ ಹೊರಕೇರಿ, ದಾನಿಗಳಾದ ವೀರೇಶ ಶಾಸ್ತ್ರಿಮಠ ದಂಪತಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅಶೋಕ ಸವಣೂರ ಮಾತನಾಡಿ, 2021ರಿಂದ 2025ರವರೆಗೆ ದಾನಿಗಳಾದ ವೀರೇಶ ಶಾಸ್ತ್ರಿಮಠ ಅವರು ನವನಗರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಒಟ್ಟು 14 ಲಕ್ಷ ರೂ.ಗಳನ್ನು ದೇಣಿಗೆ ನೀಡಿ, ಬಡ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಸರ್ಕಾರಿ ಪಿಯು ಕಾಲೇಜುಗಳ ದ್ವಿತೀಯ ಪಿಯು ಫಲಿತಾಂಶದಲ್ಲಿ ನವನಗರ ಪಿಯು ಕಾಲೇಜು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಪ್ರಾಚಾರ್ಯರಾಗಿ ಬಡ್ತಿ ಹೊಂದಿದ ಸಂಜೀವಕುಮಾರ ಬಿ., ವರ್ಗಾವಣೆೆಗೊಂಡ ಸುಪ್ರಿಯ ಕಟಗಿ, ಮತ್ತು ಎಂ.ಬಿ. ಕಂಬಳಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಒಕ್ಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಿ ವಿ. ಮಡಿವಾಳ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕ ಎಸ್.ಬಿ. ವಸ್ತ್ರಮಠ ನಿರೂಪಿಸಿದರು. ವಿ.ಸಿ. ಪಟ್ಟಣಶೆಟ್ಟಿ ವಂದಿಸಿದರು.