ಶಿಗ್ಗಾಂವಿ: ನನಗೂ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಆಗಬೇಕೆಂಬ ಆಸೆ ಇದೆ. ಆಸೆ ಎಲ್ಲರಿಗೂ ಸಹಜ, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿಗಳ ಬದಲಾವಣೆ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡುತ್ತಿದೆ. ಸರ್ಕಾರದ ಪೂರ್ಣಾವಧಿವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅವರ ಮಂತ್ರಿ ಮಂಡಲದಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಹಿಂದೆ ಸತೀಶ ಜಾರಕಿಹೊಳಿ ಸಿಎಂ ಆಗ್ತಾರೆ ಅಂತ ಸುದ್ದಿ ಹರಿದಾಡಿತ್ತು. ಈಗ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈ ವಿಚಾರವಾಗಿ ನಾನು ಯಾವುದೇ ಲಾಬಿನೂ ಮಾಡಿಲ್ಲ. ಒತ್ತಡವನ್ನೂ ಹಾಕಿಲ್ಲ. ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇವೆ, ಅದಕ್ಕೆ ಖುಷಿಯಿದೆ. ಮಂತ್ರಿಯಾಗಿದ್ದೇನೆ ತೃಪ್ತಿಯಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಂಬಂಧ ಅಂತಿಮವಾಗಿ ವರಿಷ್ಠರು ತೀರ್ಮಾನ ಮಾಡಬೇಕು. ಯಾರಿಗೆ ಕೊಡಬೇಕು, ಯಾಕೆ ಕೊಡಬೇಕು, ಅದರಿಂದ ಆಗುವ ಲಾಭ ಏನು ಎಂಬ ಬಗ್ಗೆ ಅವರು ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಅಧಿಕಾರ ಹಂಚಿಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಮಾತು ಕೇಳಿ ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿ, ಈ ಬಾರಿ ಆ ರೀತಿ ಆಗಿಲ್ಲ. ಪೋರ್ಟ್ಫೋಲಿಯೋದಲ್ಲಿ ನಾವೇ ಇದ್ದೇವೆ. ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಒಳ್ಳೆಯ ಖಾತೆಗಳನ್ನೇ ಕೊಟ್ಟಿದಾರೆ ಎಂದು ಸಚಿವರು ತಿಳಿಸಿದರು.
ಶಿಗ್ಗಾಂವಿ ಕ್ಷೇತ್ರವನ್ನು ಗೆಲ್ಲುವ ವಿಶ್ವಾಸ ಮೊದಲೇ ಇತ್ತು. ಲೋಕಸಭಾ ಚುನಾವಣೆ ನಂತರ ನಮ್ಮ ಟೀಮ್ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದೆ. ಅಹಿಂದ ಮತಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ, ಜತೆಗೆ ಇಲ್ಲಿನ ಕಾರ್ಯಕರ್ತರ ಶ್ರಮದಿಂದ ಕ್ಷೇತ್ರವನ್ನು ಗೆಲ್ಲಲು ಸಹಾಯವಾಗಿದೆ. ಶಿಗ್ಗಾಂವಿಯಲ್ಲಿ ನಾವು ಬೊಮ್ಮಾಯಿ ಸೋಲಿಸಬೇಕು ಅಥವಾ ಬಿಜೆಪಿ ಸೋಲಿಸಬೇಕು ಎಂದು ಚುನಾವಣೆ ಮಾಡಲಿಲ್ಲ. ಕಾಂಗ್ರೆಸ್ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಿದ್ದರಿಂದ ಜಯ ನಮ್ಮದಾಗಿದೆ ಎಂದರು.
ಶಾಸಕ ಯಾಸೀರಖಾನ್ ಪಠಾಣ, ಸೋಮಣ್ಣ ಬೇವಿನಮರದ, ಆನಂದ ಗಡ್ಡದೇವರಮಠ, ವಿನೋದ ಅಸೂಟಿ, ರಾಜೇಶ್ವರಿ ಪಾಟೀಲ, ಸ್ಥಳೀಯ ಮುಖಂಡರು ಇದ್ದರು.
ಕಾಂಗ್ರೆಸ್ನಲ್ಲಿಯೂ ಇದೆ ಬಣ ರಾಜಕೀಯ
ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಇದೆ. ಬೇರೆ ಪಕ್ಷದಲ್ಲೂ ಬಣ ಬಡಿದಾಟಗಳಿವೆ. ಎಲ್ಲ ಪಕ್ಷಗಳಲ್ಲೂ ಬಣಗಳು ಇರುತ್ತವೆ. ಆದರೆ, ಚುನಾವಣೆ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದರು.