ಜಿಲ್ಲೆ

ನಾಡಿನ ಸಾಂಸ್ಕೃತಿಕ, ಪ್ರಾಚೀನತೆಗೆ ಹುಬ್ಬಳ್ಳಿ ಗಣೇಶೋತ್ಸವ ಕೊಂಡಿ

ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶೋತ್ಸವವು ನಾಡಿನ ಆಧುನಿಕ, ಸಾಂಸ್ಕೃತಿಕ, ಪ್ರಾಚೀನ ಪರಂಪರೆಗೆ ಕೊಂಡಿಯಾಗುತ್ತಿದೆ. ಯುವಕರಲ್ಲಿ ಏಕಭಾವವನ್ನು ಒಡಮೂಡಿಸುತ್ತಿದೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಶನಿವಾರ ಏರ್ಪಡಿಸಿದ್ದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಗಣೇಶ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರಿಂದ ವ್ಯಾಪಾರ, ಉದ್ಯಮ, ಕಾರ್ಮಿಕರಿಗೆ ಉದ್ಯೋಗಾವಕಾಶ ಲಭಿಸಿದೆ. ಒಂದು ಹಬ್ಬವು ಎಲ್ಲವನ್ನೂ, ಎಲ್ಲರನ್ನೊಳಗೊಂಡು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವವು ಭವ್ಯ ಪರಂಪರೆಯನ್ನು ಹೊಂದಿದೆ. ಇದರ ಉಸ್ತುವಾರಿ ಹೊತ್ತ ಮಹಾಮಂಡಳಕ್ಕೆ 50 ವರ್ಷವಾಗುತ್ತಿದೆ. ಬಾಲಗಂಗಾಧರ ತಿಲಕ್ ಕೂಡ ಹುಬ್ಬಳ್ಳಿಗೆ ಆಗಮಿಸಿ ಗಣೇಶೋತ್ಸವದ ಬಗ್ಗೆ ಪರಿಚಯಿಸಿ ಹೋಗಿದ್ದಾರೆ. ನಮ್ಮ ಹುಬ್ಬಳ್ಳಿ ಗಣೇಶೋತ್ಸವಕ್ಕೂ ಸ್ವಾತಂತ್ರೃಕ್ಕೂ ಸಂಬಂಧವಿದೆ. ಇಂಥ ಇತಿಹಾಸ ಹೊಂದಿರುವ ಹುಬ್ಬಳ್ಳಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಭಾವೈಕ್ಯತೆಯಿಂದ ಗಣೇಶ ಹಬ್ಬ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ ಎಂದರು.

ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ, ಶ್ರೀ ಗಣೇಶೋತ್ಸವ ಮಂಡಳ ದುರ್ಗದ ಬೈಲ್ ಅಧ್ಯಕ್ಷ ರವೀಂದ್ರ ರೇವಣಕರ ಮಾತನಾಡಿದರು.

ಎಸ್.ಎಸ್. ಕಮಡೊಳ್ಳಿಶೆಟ್ಟರ್, ರಾಜಶೇಖರ ಕರಕಣ್ಣವರ, ಈರಣ್ಣ ಪಾಳೇದ, ಎಂ.ಎಂ. ಡಂಬಳ, ಅಶೋಕ ಬೆಳ್ಳಿಗಟ್ಟಿ, ಸಿದ್ದಣ್ಣ ಅಂಗಡಿ, ಮಹೇಶ ಶೇಟ್, ಸಂತೋಷ ಕಾಟವೆ, ಸಿ.ಬಿ. ನವಲಗುಂದ, ಗುರುನಾಥ ಪತ್ತಾರ, ಅನಿಲ ಬೇವಿನಕಟ್ಟಿ, ವಾಮನ ಕವಳೇಕರ, ಬಾಬಣ್ಣ ಪವಾರ, ರವೀಂದ್ರನಾಥ ಕಾನೋಜಿ, ಮೋಹನ ಗಬ್ಬೂರ, ಆದಿತ್ಯಾ ಬ್ಯಾಹಟ್ಟಿ, ಅನಿಲ ಕವಿಶೆಟ್ಟಿ, ಸಂಗೀತಾ ಇಜಾರದ, ಅಕ್ಕಮ್ಮ ಕಂಬಳಿ, ಸರಸ್ವತಿ ಮೆಹರವಾಡೆ, ರೂಪಾ ಅಂಗಡಿ, ಸಾಧನಾ ಪೂಜಾರ, ರೇಖಾ ಆಪ್ಟೆ , ರತ್ನಾ ಬಸಾಪುರ, ಅಶ್ವಿನಿ ತೆಗ್ಗಿಹಳ್ಳಿ, ಗಾಯತ್ರಿ ನೆಲ್ಲಿಕೊಪ್ಪ, ವಿಜಯಲಕ್ಷ್ಮೀ ಏಕಬೋಟೆ, ಉಷಾ ಡೋಣಿ, ಡಾ. ಮಂಜುಳಾ ಹತ್ತಿಮತ್ತೂರ ಇತರರು ಇದ್ದರು.

ಶಾಂತರಾಜ ಪೋಳ ಸ್ವಾಗತಿಸಿದರು. ಅಲ್ತಾಫ್ ಕಿತ್ತೂರ ವಂದಿಸಿದರು. ಅಮರೇಶ ಹಿಪ್ಪರಗಿ ನಿರೂಪಿಸಿದರು.