ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
ಚಿಪ್ಪಿನೊಳಗಡೆ ಮುತ್ತು ಮಲಗಿದೆ ಮುತ್ತಿನೊಳಗಡೆ ಮತ್ತು ಮಲಗಿದೆ ಮತ್ತು ಈಗ ನೆತ್ತಿಗೇರಿದೆ ಮರಭೂಮಿಗೆ ಮಳೆ ಇಳಿದಿರೋ ಹಾಗೆ ... ಎನ್ನುವ ಮಾಸ್ತಿ ಗುಡಿ ಚಿತ್ರದ ಹಾಡಿನಂತೆಯೇ ಬಯಲುಸೀಮೆ ನಾಡು ಗದಗ ತಾಲೂಕಿನ ಮೂವರು ಯುವಕರು ಸಮುದ್ರದ ಕಡಲು ಮತ್ತು ನದಿ ಪಾತ್ರಗಳಿಗೆ ಸೀಮಿತವಾಗಿದ್ದ ‘ಕೃತಕ ಮುತ್ತು ಕೃಷಿ’ಯನ್ನು ಗದಗಿಗೆ ತಂದು, ಹಾತಲಗೇರಿಯಲ್ಲಿ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಹಾತಲಗೇರಿ ಗ್ರಾಮದ ಕೃಷ್ಣಾ ಜಾಲಮ್ಮನವರ, ವೀರೇಶ ಹಿರೇಮಠ ಮತ್ತು ವೀರಭದ್ರಯ್ಯ ಮುರಗಿಮಠ ಎಂಬುವವರು ಇಲ್ಲಿನ ಕಲ್ಲು ಕ್ವಾರಿಯಲ್ಲಿ ‘ಸಿಹಿ ನೀರು ಮುತ್ತು ಕೃಷಿ’ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ಎಂಬಿಎ ಪದವೀಧರ ಮೂವರು ಸ್ನೇಹಿತರು ಸೇರಿ ಕಲ್ಲು ಕ್ವಾರಿಯಲ್ಲಿ ಕುಳಿತು ಹೊಸತನದ ಉದ್ದಿಮೆ ಶುರು ಮಾಡುವ ಬಗ್ಗೆ ಯೋಚಿಸುವಾಗ ಹೊಳೆದಿದ್ದೆ ಮುತ್ತು ಕೃಷಿ. ಆಗ ಅಲ್ಲಿಲ್ಲಿ ಮಾಹಿತಿ ಕಲೆಹಾಕಿ ಹಾತಲಗೇರಿ ಗ್ರಾಮದ ಎರಡು ಎಕರೆ ಕಲ್ಲು ಕ್ವಾರಿಯಲ್ಲಿ 1 ಎಕರೆ ವಿಸ್ತಿರ್ಣದ ಸಿಹಿ ನೀರಿನ ಹೊಂಡದಲ್ಲಿ ಕೃತಕ ಮುತ್ತು ಕೃಷಿ ಆರಂಭಿಸಿದರು. ಆರ್ಡಿ ಪರ್ಲ್ ಜತೆ ಒಡಂಬಡಿಕೆ: ಮೂವರೂ ಸ್ನೇಹಿತರು ಮೊದಲು ಐದಾರು ಪರ್ಲ್ ವ್ಯವಹಾರ ಕಂಪನಿಗಳೊಂದಿಗೆ ಮಾತನಾಡಿ, ಕೊನೆಗೆ ಪಶ್ಚಿಮಬಂಗಾಳ ಕೊಲ್ಕತ್ತದ ಡಿ.ಆರ್. ಪರ್ಲ್ (ಪ್ರೖೆ) ಲಿ. ಕಂಪನಿಯೊಂದಿಗೆ ಮುತ್ತು ಕೃಷಿ ಮಾಡಲು ನಿರ್ಧರಿಸಿ, ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುತ್ತು ಕೃಷಿಗೆ ಮುಂದಾದರು. ಕರ್ನಾಟಕದವರ ಮೇಲೆ ನಂಬಿಕೆ: ದಿಲೀಪ್ ಮತ್ತು ರಾಜು ಎಂಬುವವರು ಡಿಆರ್ ಪರ್ಲ್ ಕಂಪನಿ ಮಾಲೀಕರು. ಇವರು ಕೂಡ ಈ ಹಿಂದೆ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಹೀಗಾಗಿ, ಕರ್ನಾಟಕದವರ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದಾರೆ. ಕರ್ನಾಟಕದವರು ಶ್ರಮ ಜೀವಿಗಳು ಮತ್ತು ಪ್ರಾಮಾಣಿಕತೆಯಿಂದ ವ್ಯವಹಾರ ಮಾಡುತ್ತಾರೆ ಎಂದು ಹೇಳಿ ಗದಗಿನ ಯುವಕರೊಂದಿಗೆ ಮುತ್ತು ಕೃಷಿ ಮಾಡಲು ತಕ್ಷಣ (ಬೈಬ್ಯಾಕ್) ಒಡಂಬಡಿಕೆ ಮಾಡಿಕೊಂಡರು. ಶಿವ, ಗಣೇಶ ಅಚ್ಚಿನ ಮುತ್ತುಳಿಗೆ ಡಿಮಾಂಡ್: ಸದ್ಯ ದೇಶ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಬೇಡಿಕೆ ಇರುವ ಶಿವ, ಪಾರ್ವತಿ, ಗಣೇಶ, ಸ್ವಸ್ತಿಕ್, 1234, ಎಬಿಸಿಡಿ, ನಕ್ಷತ್ರ, ಹಾರ್ಟ್ ಸಿಂಬಲ್, 786 ಚಿತ್ರದ ಅಚ್ಚುಗಳನ್ನು ಕಪ್ಪೆಚಿಪ್ಪಿನಲ್ಲಿ ಹಾಕಿ ಮುತ್ತುಗಳಾಗಿ ಬೆಳೆಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಶಿವ, ಪಾರ್ವತಿ, ಗಣೇಶ, ನಕ್ಷತ್ರ ಚಿತ್ರದ ಮುತ್ತುಗಳಿಗೆ ಭಾರಿ ಡಿಮಾಂಡ್ ಇದೆ. ಮೊದಲ ಫಸಲು 14.46 ಲಕ್ಷ ರೂ. ಆದಾಯ: ಮೊದಲ ಪ್ರೊಜೆಕ್ಟ್ 2020ರಲ್ಲಿ ಮುತ್ತು ಕೃಷಿ ಮಾಡಲಾಯಿತು. ಮೂವರು ಸ್ನೇಹಿತರು ಸೇರಿ ತಲಾ ಎರಡು ಲಕ್ಷ ರೂ.ಗಳಂತೆ ಟ್ಟು 6 ಲಕ್ಷ ರೂ. ಬಂಡವಾಳ ಹಾಕಿದ್ದರು. 2022ರ ಮಾರ್ಚ್ನಲ್ಲಿ ಡಿ.ಆರ್ ಪರ್ಲ್ ಫಾಮ್ರ್ ಕಂಪನಿಯವರು ಒಟ್ಟು 14.46 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದಾರೆ. ಎರಡನೇ ಫಸಲು 70 ಲಕ್ಷ ರೂ. ಆದಾಯ: 2022ರ ಏಪ್ರಿಲ್ನಲ್ಲಿ ಮೂವರು ಸ್ನೇಹಿತರು ಮತ್ತು ಬೆಂಗಳೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗದ ಆರು ಜನ ಸೇರಿ ಒಟ್ಟು 46 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. 2025ರ ಫೆಬ್ರವರಿಯಲ್ಲಿ ಒಟ್ಟು 70 ಲಕ್ಷ ರೂ. ಆದಾಯ ಬಂದಿದೆ. ಹೂಡಿಕೆ ಮಾಡಿದ ಎಲ್ಲರಿಗೂ 1 ಲಕ್ಷ ರೂ.ಗೆ 80 ಸಾವಿರ ರೂ.ನಂತೆ ಆದಾಯ ಬಂದಿದೆ. 3ನೇ ಫಸಲು 1.84 ಕೋಟಿ. ರೂ. ನಿರೀಕ್ಷೆ: 2025ರ ಮೇನಲ್ಲಿ 1.60 ಲಕ್ಷ ಕಪ್ಪೆಚಿಪ್ಪುಗಳನ್ನು ಮುತ್ತು ಕೃಷಿಯಲ್ಲಿ ತೊಡಗಿಸಲಾಗಿದೆ. ಒಂದು ಕಪ್ಪೆಚಿಪ್ಪಿನಲ್ಲಿ 2 ಮುತ್ತುಗಳಂತೆ 3.20 ಲಕ್ಷ ಮುತ್ತು ಸಿಗಬೇಕು. ಆದರೆ, ಶೇ. 50ರಷ್ಟು ಮೊರ್ಟಿಲಿಟಿ ಮೈನಸ್ ಮಾಡಲಾಗುತ್ತದೆ. ಇನ್ನುಳಿದ 1.60 ಲಕ್ಷ ಮುತ್ತುಗಳಿಗೆ ಕಂಪನಿಯ ಒಡಂಬಡಿಕೆಯಂತೆ ಒಂದು ಮುತ್ತಿಗೆ 115 ರೂ. ಮಾರಾಟ ಮಾಡಿದರೆ ಒಟ್ಟು 1.84 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಮುತ್ತು ಕೃಷಿಕ ವೀರೇಶ ಹಿರೇಮಠ. 98 ಲಕ್ಷ ರೂ. ಬಂಡವಾಳ: 2025ರಲ್ಲಿ ಒಂದು ಕಪ್ಪೆಚಿಪ್ಪಿಗೆ 60 ರೂ.ನಂತೆ 1.60 ಲಕ್ಷ ಮಸೆಲ್ಸ್ಗಳಿಗೆ ಒಟ್ಟು 96 ಲಕ್ಷ ರೂ. ಮತ್ತು ನಿರ್ವಹಣೆ ವೆಚ್ಚ 2 ಲಕ್ಷ ರೂ. ಸೇರಿ ಒಟ್ಟು 98 ಲಕ್ಷ ರೂ. ಬಂಡವಾಳ ಹಾಕಲಾಗಿದೆ. ಇದು 2027ರ ಮೇ ತಿಂಗಳಲ್ಲಿ ಫಸಲು ಕೈಸೇರಲಿದೆ. ಸಿಹಿ ನೀರು ಸಿಕ್ಕಿರುವುದು ಪ್ಲಸ್ ಪಾಯಿಂಟ್: ಒಂದು ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸಿಹಿ ನೀರು ಸಿಕ್ಕಿರುವುದು ನಮ್ಮ ಸೌಭಾಗ್ಯ. ಮುತ್ತು ಕೃಷಿಗೆ ಸೀಹಿ ನೀರು ಹೆಚ್ಚು ಸೂಕ್ತ. ಇದರಿಂದ ಗುಣಮಟ್ಟದ ಮುತ್ತುಗಳು ತಯಾರಾಗುತ್ತವೆ. ಇಲ್ಲಿನ ಕೆರೆ 40 ಅಡಿ ಆಳ ಇದ್ದು, ಇಲ್ಲಿನ ನೀರಿನಲ್ಲಿ ಅಮೋನಿಯಾ ಸಮಸ್ಯೆ ಇಲ್ಲ. ಕೆರೆಗೆ ಹೊರಗಿನ ಯಾವುದೇ ನೀರು ಬಂದು ಸೇರುವುದಿಲ್ಲ. ಹೀಗಾಗಿ ನೀರು ಸದಾ ಶುದ್ಧವಾಗಿರುತ್ತದೆ. ಇದು ಮುತ್ತು ಕೃಷಿಗೆ ವರದಾನವಾಗಿದೆ. ಮುತ್ತು ಕೃಷಿ ವಿಧಾನ: ಆರ್ಡಿ ಪರ್ಲ್ ಕಂಪನಿಯವರು ಪಶ್ಚಿಮ ಬಂಗಾಳದ ನದಿಯಲ್ಲಿ ನೈಸರ್ಗಿಕವಾಗಿ ಹುಟ್ಟಿದ ಕಪ್ಪೆಚಿಪ್ಪುಗಳನ್ನು ರೈಲಿನ ಮೂಲಕ ಗದಗಿಗೆ ತರುತ್ತಾರೆ. ಅವುಗಳನ್ನು ನೀರಿನಲ್ಲಿ ತೊಳೆದು ಒಂದು ದಿನ ನೀರಿನಲ್ಲಿ ಇಡುತ್ತಾರೆ. ಬಳಿಕ ಕ್ಯಾಲ್ಸಿಯಂನಿಂದ ತಯಾರಿಸಿದ ಎರಡು ಅಚ್ಚುಗಳನ್ನು (ನ್ಯೂಕ್ಲಿಯಸ್) ಸರ್ಜರಿ ಮೂಲಕ ಆ ಕಪ್ಪೆಚಿಪ್ಪುಗಳ ಒಳಗೆ ಅಳವಡಿಸುತ್ತಾರೆ. ಆ ಮಸೆಲ್ಸ್ಗಳನ್ನು ನೆಟ್ಬ್ಯಾಗ್ನಲ್ಲಿ 2ರಂತೆ ಬೇರೆಯಾಗಿ ಕಟ್ಟಿ ಒಟ್ಟು 20 ಕಪ್ಪೆಚಿಪ್ಪುಗಳನ್ನು ಒಂದು ನೆಟ್ಬ್ಯಾಗ್ನಲ್ಲಿ ಹಾಕುತ್ತಾರೆ. ಹೀಗೆ 4 ಬ್ಯಾಗ್ ಕಟ್ಟಿದ ಬಳಿಕ ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ ಕಟ್ಟಲಾಗುತ್ತದೆ. (ಇದರಿಂದ ಅವು ನೀರಿನಲ್ಲಿ ತೇಲಾಡುತ್ತವೆ.) ಬಳಿಕ ನೆಟ್ ಬ್ಯಾಗನ್ನು ಒಂದು ದೊಡ್ಡ ಹಗ್ಗಕ್ಕೆ ಕಟ್ಟುತ್ತಾರೆ. ಆ ಹಗ್ಗವನ್ನು ಕೆರೆ ಹೊಂಡದ ಎರಡೂ ಬದಿಗಳಲ್ಲಿ ಕಟ್ಟಿ ನೀರಿನಲ್ಲಿ 4 ಅಡಿ ಆಳದವರೆಗೆ ಜೋತು ಬಿಡಲಾಗುತ್ತದೆ. ಬೇಕು ನಿರ್ವಹಣೆ: ಪ್ರತಿ 15 ದಿನಕ್ಕೊಮ್ಮೆ ವಾಟರ್ ಪ್ಯಾರಾಮೀಟರ್ ಚೆಕ್ ಮಾಡಬೇಕು. ಟೊಟಲ್ ಡಿಸಾಲ್ವ ಸಾಲಿಡ್ (ಟಿಡಿಎಸ್), ಅಮೋನಿಯಾ, ಆಕ್ಸಿಜನ್ ಲೇವಲ್, ಚೆಕ್ ಮಾಡಬೇಕು. ನೀರಿನಲ್ಲಿನ ಖನಿಜಾಂಶ, ಶುದ್ಧ ನೀರಿನ ಪ್ರಮಾಣ ಪರೀಕ್ಷೀಸಲಾಗುತ್ತದೆ. ಕೆರೆಯ ಸುತ್ತ ಕಲ್ಲಿನ ಕ್ವಾರಿಗೆ ಸುಣ್ಣದ ನೀರು ಮತ್ತು ಅರಿಷಿಣ ನೀರು ಸಿಂಪಡಿಸಲಾಗುವುದು. ಸಾಸಿವೆ ಕಾಳು-ಆಕಳ ಸೆಗಣಿ ಹಿಂಡಿ ಆಹಾರ: ಕಪ್ಪೆಚಿಪ್ಪಿಗೆ ಆಹಾರವಾಗಿ 3 ತಿಂಗಳಿಗೊಮ್ಮೆ 50 ಕೆಜಿ ಸಾಸಿವೆ ಮತ್ತು 30 ಕೆಜಿ ಆಕಳ ಸೆಗಣಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ 5 ದಿನ ನೆನೆಸಿಡಲಾಗುವುದು. ಬಳಿಕ ಹಿಂಡಿಯನ್ನು ಸೋಸಿ ಕಪ್ಪೆಚಿಪ್ಪುಗಳ ಸಮೀಪ ಹಾಕಲಾಗುವುದು. ಇದರಲ್ಲಿರುವ ಮೈಕ್ರೋ ಬ್ಯಾಕ್ಟೀರಿಯಾಗಳನ್ನು ಕಪ್ಪೆಚಿಪ್ಪಿನಲ್ಲಿರುವ ಸರಿಸೃಪ ಜೀವಿ ತಿನ್ನುತ್ತದೆ. ಒಂದು ಕಪ್ಪೆಚಿಪ್ಪಿಗೆ 60 ರೂ. ಖರ್ಚು: ಡಿ.ಆರ್. ಪರ್ಲ್ ಫಾಮ್ರ್ ಕಂಪನಿಯವರು ಒಂದು ಕಪ್ಪೆಚಿಪ್ಪಿಗೆ 60 ರೂ. ದರ ನಿಗದಿ ಮಾಡಿದ್ದಾರೆ. ಇದರಲ್ಲಿ ಕಪ್ಪೆಚಿಪ್ಪು, ನೆಟ್ ಬ್ಯಾಗ್, ನ್ಯೂಕ್ಲಿಯಸ್, ಕೆರೆಯಲ್ಲಿ ಮುತ್ತು ಕೃಷಿಗೆ ಬಳಸುವ ಹಗ್ಗ, ಅಚ್ಚು ಅಳವಡಿಸುವ ಸರ್ಜರಿ, ಕೂಲಿಕಾರರ ಕೂಲಿ ಒಳಗೊಂಡಿರುತ್ತದೆ. ಮುತ್ತು ಹೀಗೆ ತಯಾರಾಗುತ್ತದೆ: ನದಿಯಲ್ಲಿರುವ ಮರಳಿನ ಒಂದು ಸಣ್ಣ ಕಣ ಅಥವಾ ವಸ್ತು ಕಪ್ಪೆಚಿಪ್ಪಿನೊಳಗೆ (ಮಸೆಲ್ಸ್) ಹೋದಾಗ ಕಪ್ಪೆಚಿಪ್ಪಿನಲ್ಲಿರುವ ಸರಿಸೃಪ ಜೀವಿ ಆ ಮರಳನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಮರಳು ಹೊರಗೆ ಹೋದರೆ ಸರಿ, ಇಲ್ಲದಿದ್ದರೆ ಆ ಕಣದ ಮೇಲೆ ದ್ರವವನ್ನು ಸುರಿಸುತ್ತ ಹೋಗುತ್ತದೆ, ಇದಕ್ಕೆ ನೇಕರ ಎನ್ನಲಾಗುತ್ತದೆ. ಹೀಗೆ ಒಂದೆಡೆ ಬೀಳುವ ದ್ರವ ದುಂಡಗಾಗಿ ಗಟ್ಟಿಯಾಗಿ ಹೊಳೆಯಲಾರಂಭಿಸುತ್ತದೆ. ಅದನ್ನೇ ಮುತ್ತು ಎಂದು ಕರೆಯುತ್ತೇವೆ. ಕಡಿಮೆ ಖರ್ಚು ಹೆಚ್ಚು ಲಾಭ: ಕಡಿಮೆ ಜಾಗದಲ್ಲಿ ಮುತ್ತು ಕೃಷಿ ಮಾಡಿ ಹೆಚ್ಚು ಆದಾಯ ಗಳಿಸಬಹುದಾಗಿದೆ. ಜಪಾನ್ ಮತ್ತು ಚೀನಾದಲ್ಲಿ ಕೃತಕ ಮುತ್ತುಗಳ ತಯಾರಿಕೆಯಲ್ಲಿ ಅಗ್ರ ಸ್ಥಾನದಲ್ಲಿವೆ. ಡಿಆರ್ ಪರ್ಲ್ ಫಾಮ್ರ್ ಕಂಪನಿ ಪ್ರಕಾರ ಗದಗ ತಾಲೂಕಿನ ಹಾತಲಗೇರಿ ಮುತ್ತುಗಳು ದಕ್ಷಿಣ ಭಾರತದಲ್ಲೇ ತುಂಬಾ ಉತ್ತಮ ಗುಣಮಟ್ಟದ ಮುತ್ತುಗಳಾಗಿವೆ. ಮುತ್ತು ಕೃಷಿಗೆ ಬೇಕು ತಾಳ್ಮೆ: ಮುತ್ತು ಕೃಷಿ ಪ್ರಕ್ರಿಯೆ ಸುಲಭ. ಆದರೆ, ಉತ್ತಮ ಗುಣಮಟ್ಟದ ಮುತ್ತುಗಳನ್ನು ಉತ್ಪಾದಿಸಲು ಸಾಕಷ್ಟು ತಾಳ್ಮೆ, ಕಠಿಣ ಪರಿಶ್ರಮ, ಅಪಾರ ಕಾಳಜಿ ಬೇಕು. ಆಸಕ್ತರು ಹಾತಲಗೇರಿ ಮುತ್ತು ಕೃಷಿಕರನ್ನು ಭೇಟಿ ಮಾಡಿ ಮಾಹಿತಿ ಪಡೆಯಬಹುದು. ಸಂಪೂರ್ಣ ಮಾಹಿತಿ ಪಡೆದು ಮುತ್ತು ಕೃಷಿ ಮಾಡಬೇಕು ಎನ್ನುತ್ತಾರೆ ಯವ ಕೃಷಿಕ ಕೃಷ್ಣಾ ಜಾಲಮ್ಮನವರ. ಇನ್ಮುಂದೆ ಮುತ್ತುಗಳಿಗೆ ಡಿಮಾಂಡ್ ಹೆಚ್ಚು: ಬಂಗಾರದ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ, ಮಹಿಳೆಯರು ಆಭರಣಗಳ ತಯಾರಿಕೆಯಲ್ಲಿ ಗುಣಮಟ್ಟದ ಮುತ್ತುಗಳ ಮೊರೆ ಹೋಗಿದ್ದು, ಇನ್ಮುಂದೆ ಭಾರಿ ಬೇಡಿಕೆ ಬರಲಿದೆ. ಕಿವಿಯೋಲೆ, ಮುತ್ತಿನ ಸರ, ಪೆಂಡೆಂಟ್ಗಳಿಗಾಗಿ ಮತ್ತುಗಳನ್ನು ಬಳಸಲಾಗುತ್ತಿದೆ.
ಮೀನುಗಾರಿಕೆ, ಜೇನು ಸಾಕಾಣಿಕೆಗೆ ಸಹಾಯಧನ, ಮತ್ತಿತರ ಸೌಲಭ್ಯ ನೀಡುವಂತೆ ಮುತ್ತು ಕೃಷಿಗೂ ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶನ, ಮಾರುಕಟ್ಟೆ ಮತ್ತಿತರ ವ್ಯವಸ್ಥೆ ಮಾಡಬೇಕು. ಅಲ್ಲದೆ, ಬಂಗಾರದ ಅಂಗಡಿಗಳ ಮಾಲೀಕರು ನಮ್ಮಲ್ಲಿ ನೇರವಾಗಿ ಮುತ್ತು ಖರೀದಿಸಿ ಇವುಗಳಿಂದ ಆಭರಣ ತಯಾರಿಸಬೇಕು. ಇದರಿಂದ ನಮಗೆ ಮತ್ತು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಭರಣ ನೀಡಲು ಅನುಕೂಲವಾಗುತ್ತದೆ. | ಕೃಷ್ಣಾ ಜಾಲಮ್ಮನವರ, ಮುತ್ತು ಕೃಷಿಕ, ಗದಗ ಮೂವರು ಸ್ನೇಹಿತರು ಸೇರಿ ಮುತ್ತು ಕೃಷಿ ಮಾಡುತ್ತಿದ್ದೇವೆ. ನಾನು ನೀರಿನ ಪ್ಯಾರಾ ಮೀಟರ್ ಚೆಕ್ ಮಾಡುವುದು, ಮಸೆಲ್ಸ್ಗಳಿಗೆ ಆಹಾರ ನೀಡುವುದು ಮತ್ತು ಮಾರ್ಕೆಟಿಂಗ್ ಮಾಡುವ ಹೊಣೆ ನಿಭಾಯಿಸುತ್ತೇನೆ. ನಮ್ಮ ಮುತ್ತು ಕೃಷಿ ಸ್ಥಳಕ್ಕೆ ರಾಜ್ಯ ಸೇರಿದಂತೆ ಕೇರಳ, ಮಹಾರಾಷ್ಟ್ರದವು› ಬಂದು ನೋಡಿ ಹೋಗಿದ್ದಾರೆ. | ವೀರಭದ್ರಯ್ಯ ಮುರಗಿಮಠ, ಮುತ್ತು ಕೃಷಿಕ, ಗದಗ ಒಂದು ಬಾರಿ ಕೆರೆಯಲ್ಲಿ ನೆಟ್ಬ್ಯಾಗ್ ಮೂಲಕ ಮುತ್ತು ಕೃಷಿ ಆರಂಭಿಸಿದ ಬಳಿಕ 21ರಿಂದ 24 ತಿಂಗಳಲ್ಲಿ ಕಪ್ಪೆಚಿಪ್ಪಿನಲ್ಲಿ ಮುತ್ತುಗಳು ರೆಡಿ ಆಗಿರುತ್ತವೆ. ಮೂರನೇ ಪ್ರೊಜೆಕ್ಟ್ನ ಮುತ್ತು ಕೃಷಿಯಲ್ಲಿ ನಮ್ಮೊಂದಿಗೆ ಮೂಲತಃ ವಿಜಯಪುರದ, ಸದ್ಯ ಆಸ್ಟ್ರೇಲಿಯಾದಲ್ಲಿರುವ ನಾಗರಾಜ ಎಂಬುವರು 25 ಲಕ್ಷ ರೂ., ಯುಎಸ್ಎನಲ್ಲಿರುವ ಎನ್ಆರ್ಐ 5 ಲಕ್ಷ ರೂ. ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯವರು ಸೇರಿ ಒಟ್ಟು 20 ಜನ ಬಂಡವಾಳ ಹಾಕಿದ್ದೇವೆ. ವೀರೇಶ ಹಿರೇಮಠ, ಮುತ್ತು ಕೃಷಿಕ, ಗದಗ ಕಳೆದ 5 ವರ್ಷಗಳಿಂದ ಗದಗ ತಾಲೂಕಿನ ಹಾತಲಗೇರಿಯಲ್ಲಿ ಮುತ್ತು ಕೃಷಿಗೆ ನಮ್ಮ ಕಂಪನಿ ಸಾಮಗ್ರಿಗಳನ್ನು ಪೂರೈಸುತ್ತಿದೆ. ಮುತ್ತು ಬೆಳೆದ ಬಳಿಕ ಅವುಗಳನ್ನು ನಾವೇ ಒಂದು ಮುತ್ತಿಗೆ 115 ರೂ. ನಂತೆ ಖರೀದಿಸುತ್ತೇವೆ. ಗದಗಿನ ಕಲ್ಲು ಕ್ವಾರಿಯ ನೀರು ತುಂಬಾ ಸಿಹಿ ಇದೆ. ಇದರಿಂದ ಉತ್ತಮ ಗುಣಮಟ್ಟದ ಮುತ್ತುಗಳು ಬೆಳೆಯುತ್ತಿವೆ. ಮುಂದಿನ ಐದಾರು ವರ್ಷದಲ್ಲಿ ಇಡೀ ದೇಶಾದ್ಯಂತ 500 ಕೋಟಿ ರೂ.ಗಳ ಬಿಜಿನೆಸ್ ಮಾಡುವ ಗುರಿ ಹೊಂದಿದ್ದೇವೆ. ಸದ್ಯ ರಾಜಸ್ತಾನ, ದೆಹಲಿ, ಜಾರ್ಖಂಡ್, ಪಶ್ಚಿಮ ಬಂಗಾಲ, ಉತ್ತರ ಪ್ರದೇಶದ ಗೋರಖ್ಪುರ, ಬೆಂಗಳೂರು ಮತ್ತಿತರ ಸ್ಥಳಗಳಲ್ಲಿ ಮುತ್ತು ಕೃಷಿಗೆ ಕಪ್ಪೆಚಿಪ್ಪು ಪೂರೈಸಿದ್ದೇವೆ. | ಮುಕ್ತೇಶ್ವರ ಪ್ರಧಾನ್ ನಿರ್ದೇಶಕರು ಡಿಆರ್ ಪರ್ಲ್ ಫಾಮ್ರ್ (ಪ್ರೖೆ ಲಿ.) ಕೋಲ್ಕತ