ಜಿಲ್ಲೆ

ಅಲ್ಲೀಪುರ ಮಹಾದೇವ ತಾತನವರ ಪುಣ್ಯಾರಾಧನೆ ಫೆ. 15ರಿಂದ

ಧಾರವಾಡ: ರಾಜೀವಗಾಂಧಿ ನಗರದಲ್ಲಿರುವ ಶ್ರೀ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ಫೆ. 15 ಹಾಗೂ 16ರಂದು ಶ್ರೀ ಮಹಾದೇವ ತಾತನವರ 37ನೇ ವರ್ಷದ ಪುಣ್ಯಾರಾಧನೆ ಏರ್ಪಾಟಾಗಿದೆ. 15ರಂದು ಬೆಳಗ್ಗೆ 7.10ಕ್ಕೆ ಷಟ್​ಸ್ಥಳ ಧ್ವಜಾರೋಹಣ. 10ಕ್ಕೆ ವಸಂತೋತ್ಸವ ಹಾಗೂ ತೆಪ್ಪೋತ್ಸವ. ಸಂಜೆ 6ಕ್ಕೆ ದೀಪಾಲಂಕಾರ, ಗಾನ ಸುಧಾ ಕಾರ್ಯಕ್ರಮ. ಶೀತಲ ಜೋಶಿ ಹಾಗೂ ಪ್ರಣಮ್ಯದೇವಿ ಹಿರೇಮಠ ಅವರಿಂದ ಭರತನಾಟ್ಯ, ಶಂಕರ ಪತ್ರಿಬಸಪ್ಪ ಅಧ್ಯಕ್ಷತೆ ವಹಿಸುವರು. ಪುಷ್ಪ ಶಂಕರ ಭಾಗವಹಿಸುವರು. 16ರಂದು ಬೆಳಗ್ಗೆ 5ಕ್ಕೆ ತಾತನವರ ಗದ್ದುಗೆಗೆ ರುದ್ರಾಭಿಷೇಕ. 5.30ಕ್ಕೆ ಅಗ್ರೋದಕ ತರುವುದು. 7ಕ್ಕೆ ಅಗ್ನಿಕುಂಡ ಕಾರ್ಯಕ್ರಮ. 9ಕ್ಕೆ ತಾತನವರ ಪಲ್ಲಕ್ಕಿ ಉತ್ಸವ, 10.30ಕ್ಕೆ ಆರಾಧನಾ ಮಹೋತ್ಸವ. 11ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದ್ದು, ಬಳೂಟಗಿಯ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರುದ್ರೇಶ ಹರಕುಣಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವೀರಣ್ಣ ವಡ್ಡಿನ, ಹುಬ್ಬಳ್ಳಿ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಪೂರ್ಣಚಂದ್ರರಾವ ಘಂಟಸಾಲ ಪಾಲ್ಗೊಳ್ಳವರು ಎಂದು ಶ್ರೀ ಮಹಾದೇವ ತಾತನವರ ಸದ್ಭಕ್ತ ಮಂಡಳಿ ತಿಳಿಸಿದೆ.

ಶ್ರೀ ಅಲ್ಲೀಪುರ ತಾತನವರ ಹಿನ್ನೆಲೆ

ಮೈಸೂರಿನ ಮರಯ್ಯಸ್ವಾಮಿ-ಮಹದೇವಮ್ಮನವರ ಉದರದಲ್ಲಿ ಹುಟ್ಟಿ ಬಂದರು. ತ್ರಿಕಾಲ ಜ್ಞಾನಿಗಳಾಗಿದ್ದ ತಾತನವರು ಬಳ್ಳಾರಿ, ಧಾರವಾಡ, ಮೈಸೂರು ಸೇರಿ ವಿವಿಧೆಡೆ ಒಟ್ಟು 9 ಮಠಗಳನ್ನು ಸ್ಥಾಪಿಸಿದ್ದಾರೆ. ಅಲ್ಲೀಪುರ ತಾತನವರು 391 ವರುಷ ಬಾಳಿದ ಪುಣ್ಯಾತ್ಮರು. ಮೈಸೂರು ಮಹಾರಾಜರ ಗುರುಗಳಾಗಿದ್ದ ಇವರು ಶಿವಯೋಗಿ ಸಾಮ್ರಾಟರು. ಮಹಾಮಹಿಮರ ಜೀವನ ಚರಿತ್ರೆ ಸಾರಿ ಹೇಳುವ ಐತಿಹಾಸಿಕ ಸತ್ಯಸಂಗತಿಗಳು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಇವೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪವಿರುವ ಕಬಿನಿ, ಭೃಗು, ಧೃವತಾರಾ ನದಿಗಳ ದಡದ ಸಂಗಮ ಕ್ಷೇತ್ರದಲ್ಲಿ ಸ್ಥಾಪಿಸಿದ ಮಠದಲ್ಲಿ ತಾತನವರು 1987ರ ಡಿ. 30ರ ವೈಕುಂಠ ಏಕಾದಶಿಯಂದು ಶಿವಯೋಗಿ ಸಾಮ್ರಾಟರು ಶಿವಯೋಗದಲ್ಲಿಯೇ ಸಮಾಧಿ ಹೊಂದಿದರು.