ಜಿಲ್ಲೆ

ರಸಗೊಬ್ಬರ ಮಾರಾಟಕ್ಕೆ ರಸೀದಿ ಕಡ್ಡಾಯ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಹುಬ್ಬಳ್ಳಿ: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲೂಕಿನ ರೈತರಿಗೆ ರಸಗೊಬ್ಬರಗಳ ಪೂರೈಕೆಯ ಬಗ್ಗೆ ನಿಗಾವಹಿಸಲು ಜಾರಿ ದಳ ತಂಡ ರಚಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಶಿರಗುಪ್ಪಿ ಹಾಗೂ ಛಬ್ಬಿ ಹೋಬಳಿ ವ್ಯಾಪ್ತಿಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳನ್ನು ಮಂಗಳವಾರ ತಪಾಸಣೆ ಮಾಡಲಾಯಿತು.

ತಹಸೀಲ್ದಾರ್ ಜೆ.ಬಿ. ಮಜ್ಜಗಿ ಮಾತನಾಡಿ, ರಸಗೊಬ್ಬರ ಮಾರಾಟಗಾರರು ರೈತರಿಗೆ ರಸಗೊಬ್ಬರ ಮಾರಾಟ ಮಾಡುವಾಗ ಕಡ್ಡಾಯವಾಗಿ ರಸೀದಿ ನೀಡಬೇಕು. ಎಲ್ಲರಿಗೂ ಕಾಣುವ ಹಾಗೆ ದರಪಟ್ಟಿ ಹಾಗೂ ದಾಸ್ತಾನು ವಿವರಗಳನ್ನು ಪ್ರದರ್ಶಿಸಬೇಕು. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು. ಒತ್ತಾಯಪೂರ್ವಕವಾಗಿ ಲಿಂಕ್ ನೀಡುವಂತಿಲ್ಲ ಹಾಗೂ ರೈತರಿಂದ ಪಹಣಿ, ಆಧಾರ ಕಾರ್ಡ್ ಪ್ರತಿ ಪಡೆದು ರಸಗೊಬ್ಬರ ವಿತರಿಸಬೇಕು ಎಂದರು.

ನಂತರ ಹುಬ್ಬಳ್ಳಿ ತಾಲೂಕಿನ ಕೋಳಿವಾಡ, ಮಲ್ಲಿಗವಾಡ, ನೂಲ್ವಿ, ಮಂಟೂರ, ಅರಳಿಕಟ್ಟಿ, ಅದರಗುಂಚಿಯ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಭೇಟಿ ನೀಡಿ ಗೊಬ್ಬರ ದಾಸ್ತಾನು ಪರಿಶೀಲಿಸಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ಕೃಷಿ ಅಧಿಕಾರಿ ಕೆ.ಬಿ. ನದಾಫ್, ಮಂಜುಳಾ ದೇವಲಾಪೂರ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಶ್ರೀಶೈಲ ದೊಡ್ಡಮನಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜೀತಕುಮಾರ ಮಾಶಾಲ್ಡಿ ಉಪಸ್ಥಿತರಿದ್ದರು.