ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ ಹರಿಯಾಣದ ಮಹಾವೀರ ಸಿಂಗ್ ಪೋಗಟ್ ಭಾರತೀಯ ಹವ್ಯಾಸಿ ಕುಸ್ತಿಪಟು, ಹಿರಿಯ ಒಲಿಂಪಿಕ್ಸ್ ತರಬೇತುದಾರ. ಇವರು ತಮ್ಮ ಪುತ್ರಿಯರಾದ ಗೀತಾ ಮತ್ತು ಬಬಿತಾ ಕುಮಾರಿಗೆ ಕುಸ್ತಿ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಆಡಿಸಿ, ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜೀವನಚರಿತ್ರೆ ಆಧಾರಿತ ಹಿಂದಿಯಲ್ಲಿ 2016ರಲ್ಲಿ ಅಮೀರಖಾನ್ ನಟನೆಯಲ್ಲಿ ಮೂಡಿ ಬಂದ ಚಿತ್ರವೇ ‘ದಂಗಲ್’. ಈ ಚಿತ್ರ ಅಂದು ಆಗ ಬಾಕ್ಸ್ ಆಫೀಸ್ನಲ್ಲಿ ಬಾರೀ ಸದ್ದು ಮಾಡಿತ್ತು. ಈ ಚಿತ್ರ ನೋಡಿದ ಅಪ್ಪಂದಿರರಿಗೆ ನಾವೂ ನಮ್ಮ ಮಕ್ಕಳಿಗೆ ಕುಸ್ತಿ ಕಲಿಸೋಣ ಎನಿಸಿರಲಿಕ್ಕೆ ಸಾಕು. ಈ ಚಿತ್ರದ ಬಗ್ಗೆ ಇಲ್ಲೇಕೆ ಪ್ರಸ್ತಾಪಿಸಲಾಗಿದೆ ಎಂದರೆ, ಹರಿಯಾಣದ ಮಹಾವೀರ ಸಿಂಗ್ರಂತೆ ಹುಬ್ಬಳ್ಳಿಯ ಉಣಕಲ್ಲನಲ್ಲಿ ಕುಸ್ತಿಪಟು ಅಶೋಕ ಕಲ್ಲಪ್ಪ ಚಿಲ್ಲಣ್ಣವರ ತಮ್ಮ ಮಕ್ಕಳಿಗೆ ಜೀವನ ಮುಡಿಪಾಗಿಟ್ಟಿದ್ದಾರೆ. ಮಕ್ಕಳಿಗೆ ಕುಸ್ತಿ ತರಬೇತಿ ನೀಡಿದ್ದಾರೆ. ಅಶೋಕ ಚಿಲ್ಲಣ್ಣವರ ಕೂಡ ಕುಸ್ತಿಪಟು ಆಗಿದ್ದು, ಮಕ್ಕಳಿಗೆ ರಕ್ತಗತವಾಗಿ ಕುಸ್ತಿ ಪಟ್ಟುಗಳು ಬಂದಿವೆ. ಮಕ್ಕಳನ್ನು ಕುಸ್ತಿ ಪಟುಗಳನ್ನಾಗಿ ಮಾಡಬೇಕು ಎಂದುಕೊಂಡ ಅಶೋಕ ಅವರು ಮಗ ಮಡಿವಾಳೇಶ ಮತ್ತು ಮಗಳು ಸರೋಜಾ ಅವರನ್ನು ನಿತ್ಯ ಬೆಳಗ್ಗೆ 5.30ರಿಂದ 8ರವರೆಗೆ ಹಾಗೂ ಸಂಜೆ 5.30ರಿಂದ 8ರವರೆಗೆ ರನ್ನಿಂಗ್, ಚಕ್ಕಡಿ ಗಾಲಿ ಉರುಳಿಸುತ್ತ ಓಡುವುದು, ಟ್ರ್ಯಾಕ್ಟರ್ ಟಯರ್ ಉರುಳಿಸುತ್ತ ಓಡಿಸುವುದು, ಸ್ಕಿಪ್ಪಿಂಗ್, ಇಬ್ಬರಿಗೂ ಕುಸ್ತಿ ಆಡಿಸಿ ವಿವಿಧ ಪಟ್ಟುಗಳನ್ನು ಹೇಳಿ ಕೊಡುತ್ತಿದ್ದರು. ಈಗ ಮಕ್ಕಳನ್ನು ದೆಹಲಿಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ತರಬೇತಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶೋಕ ಚಿಲ್ಲಣ್ಣವರ ಅವರಿಗೆ ನಾಲ್ವರು ಹೆಣ್ಣುಮಕ್ಕಳು. ಅವರಲ್ಲಿ ಇಬ್ಬರು ಬಿಎಸ್ಸಿ, ಒಬ್ಬ ಮಗಳು ಆರನೇ ತರಗತಿ ಓದುತ್ತಿದ್ದಾರೆ. ಇನ್ನೊಬ್ಬ ಮಗಳು ಸರೋಜಾ ಮತ್ತು ಮಗ ಮಡಿವಾಳೇಶ ದೆಹಲಿಯ ಸ್ಪೋರ್ಟ್ಸ್ ಶಾಲೆಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರಿಗೆ ಪದವಿವರೆಗೆ ಓದಿನ ಜತೆಗೆ ಕುಸ್ತಿ ತರಬೇತಿ ನೀಡಿ ಒಲಿಂಪಿಕ್ಗೆ ತಯಾರು ಮಾಡಲಾಗುತ್ತಿದೆ.
ಕುಸ್ತಿ ಕ್ರೀಡೆಗೆ ಕರ್ನಾಟಕದಲ್ಲಿ ಇನ್ನೂ ಹೆಚ್ಚಿನ ಮನ್ನಣೆ ಸಿಗಬೇಕಿದೆ. ಕುಸ್ತಿ ಮಕ್ಕಳಿಗೆ ಶಿಸ್ತು ಕಲಿಸುತ್ತದೆ. ಜಿಲ್ಲೆಗೊಂದು ವಸತಿಯುತ ಕ್ರೀಡಾಶಾಲೆಗಳ ಅಗತ್ಯವಿದೆ. ದೆಹಲಿ ಮಾದರಿಯಲ್ಲಿ ಒಂದೇ ಕ್ಯಾಂಪಸ್ನಲ್ಲಿ ಓದು, ಕುಸ್ತಿ ತರಬೇತಿಯಂಥ ಶಾಲೆ ತೆರೆಯಲು ರಾಜ್ಯ ಸರ್ಕಾರ ಮುಂದಾಗಬೇಕು. ಮಕ್ಕಳಿಗೆ ನಾನು ಕುಸ್ತಿ ಕಲಿಸಲು ದಂಗಲ್ ಚಿತ್ರ ಪ್ರೇರಣೆ ನೀಡಿದೆ. | ಅಶೋಕ ಚಿಲ್ಲಣ್ಣವರ ಮಡಿವಾಳೇಶ- ಸರೋಜಾ ಅವರ ತಂದೆ, ಕುಸ್ತಿಪಟು ಉಣಕಲ್ಲಿನ ಸರೋಜಾ ಚಿಲ್ಲಣ್ಣವರ ಧಾರವಾಡದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವಸತಿ ಶಾಲೆಯ ಅಥ್ಲೆಟಿಕ್ಸ್ ತರಬೇತಿಗೆ ಆಯ್ಕೆಯಾಗಿ, ತರಬೇತಿ ಪಡೆದಿದ್ದಾಳೆ. ಇತ್ತೀಚೆಗೆ ದೆಹಲಿಯ ಕ್ರೀಡಾ ಶಾಲೆಗೆ ಆಯ್ಕೆಯಾಗಿದ್ದಾಳೆ. ಪರಿಶ್ರಮ ಪಡುವ ಗುಣ ಹೊಂದಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ. | ಶ್ಯಾಮಲಾ ಪಾಟೀಲ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಧಾರವಾಡ ಜಿಲ್ಲಾ ಅಥ್ಲೆಟಿಕ್ಸ್ ಕೋಚ್ ಹುಬ್ಬಳ್ಳಿ ಉಣಕಲ್ಲನ ಅಶೋಕ ಚಿಲ್ಲಣ್ಣವರ ಅವರ ಮಗ ಮತ್ತು ಮಗಳು ಕುಸ್ತಿಯಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ. ಕುಸ್ತಿ ಕ್ರೀಡೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಮುಂದೆ ಬರಬೇಕು. ಬೆಳಗಾವಿಯಲ್ಲಿ ಪುರುಷರ ಕುಸ್ತಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಏಪ್ರಿಲ್ನಲ್ಲಿ ಜಮಖಂಡಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕುಸ್ತಿ ಅಕಾಡೆಮಿ ತೆರೆಯಲಾಗುತ್ತಿದೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಕುಸ್ತಿಪಟುಗಳಿಗೆ ವಿಶೇಷ ಕಾಳಜಿ ವಹಿಸಿ, ಸಹಾಯ-ಸಹಕಾರ ನೀಡಿದ್ದಾರೆ. | ರತನಕುಮಾರ ಮಠಪತಿ, ಅಂತಾರಾಷ್ಟ್ರೀಯ ಹಿರಿಯ ಕುಸ್ತಿಪಟು, ಬೆಳಗಾವಿ, ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘದ ಅಧ್ಯಕ್ಷರು