ಜಿಲ್ಲೆ

ಶಾಹೀನ್ ಕಾಲೇಜಿನಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಅಂಚೆ ಇಲಾಖೆ ವತಿಯಿಂದ ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಜನ ಸಂಪರ್ಕ ಅಭಿಯಾನ ನಡೆಯಿತು.

ಪ್ರಧಾನ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟ ಮಾತನಾಡಿ, ಅಂಚೆ ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಕೊಂಡೊಯ್ಯಲು ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಅಂಚೆ ಇಲಾಖೆಯ ವಿವಿಧ ಸೇವೆಗಳು ಹಾಗೂ ಯೋಜನೆಗಳ ಲಾಭ ಪಡೆಯಬೇಕು ಎಂದು ಹೇಳಿದರು.

ಆಧಾರ್ ತಿದ್ದುಪಡಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಆಧಾರ್ ಕೌಂಟರ್ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಜೀವ ವಿಮೆ, ಅಪಘಾತ ವಿಮೆ ಸೇರಿದಂತೆ ಅನೇಕ ಉತ್ತಮ ಯೋಜನೆಗಳಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಖಾದ್ರಿ ಅವರು ಮಾತನಾಡಿ, ಅಂಚೆ ಇಲಾಖೆ ಶಾಹೀನ್ ಕಾಲೇಜಿನಲ್ಲಿ ಆಧಾರ್ ಕೌಂಟರ್ ಆರಂಭಿಸುವ ಮೂಲಕ ವಿದ್ಯಾರ್ಥಿಗಳ ಸಮಯ ಉಳಿಸಿದೆ. ಈವರೆಗೆ 522 ವಿದ್ಯಾರ್ಥಿಗಳ ಆಧಾರ್ ಕಾರ್ಡ್‍ನಲ್ಲಿ ಅವಶ್ಯಕ ತಿದ್ದುಪಡಿಗಳು ಆಗಿದ್ದು, ಇನ್ನೂ 400 ವಿದ್ಯಾರ್ಥಿಗಳ ತಿದ್ದುಪಡಿ ಆಗಬೇಕಿದೆ ಎಂದು ಹೇಳಿದರು.

ಆಧಾರ್ ತಿದ್ದುಪಡಿ ಸಿಬ್ಬಂದಿ ಕಿಶೋರ್ ಕುಮಾರ ಅವರನ್ನು ಸನ್ಮಾನಿಸಲಾಯಿತು. ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್, ಕೃಷಿ ಇಲಾಖೆಯ ಉಪ ನಿರ್ದೇಶಕಿ ಆರತಿ ಪಾಟೀಲ, ವಂಶಿ, ಅಜಾಮ್ ಇದ್ದರು.