ಭತಗುಣಕಿ ಗ್ರಾಮದಿಂದ ಮೈಲಾರಕ್ಕೆ ಹೋಗುವ ರಸ್ತೆ ಕೆಟ್ಟಿರುವುದು.  
ಜಿಲ್ಲೆ

ಗ್ರಾಮೀಣ ರಸ್ತೆಗಳ ಸ್ಥಿತಿ ಅಧೋಗತಿ

Vijayapura - Desk - Shamarao Kulkarni

ಇಂಡಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆಡಳಿತ ವ್ಯವಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ತಾಲೂಕಿನ ಭತಗುಣಕಿ ಗ್ರಾಮದಿಂದ ಮೈಲಾರ ಗ್ರಾಮಕ್ಕೆ ಹೋಗುವ ರಸ್ತೆ, ತಡವಲಗಾ ಮೂಲಕ ನಿಂಬಾಳ&ಕ್ಯಾತನಕೇರಿಗೆ ಹೋಗುವ ರಸ್ತೆ, ಭುಂಯ್ಯಾರದಿಂದ ಖೇಡಗಿಗೆ ಹೋಗು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ.

ಇದರಿಂದಾಗಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಮಳೆಯಾದರೆ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ಸಂಚಕಾರ ಉಂಟಾಗುತ್ತದೆ. ಹೀಗಾಗಿ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಈ ರಸ್ತೆಗಳು ಬಹಳ ವರ್ಷಗಳಿಂದ ಹದಗೆಟ್ಟಿದ್ದರೂ ಯಾವೊಬ್ಬ ಅಧಿಕಾರಿಗಳು, ಜನಪ್ರತಿನಿಧಿಗಳು ರಸ್ತೆ ದುರಸಿಗೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ರಸ್ತೆ ನಿರ್ಮಾಣ ಅಥವಾ ರಿಪೇರಿಗೆ ಮುಂದಾಗುವರೇ ಕಾದು ನೋಡಬೇಕಿದೆ.