ಇಂಡಿ: ಕರ್ನಾಟಕ ವಿದ್ಯುತ್ ಪ್ರಸಾರ ನಿಗಮದಿಂದ ತಾಲೂಕಿನಲ್ಲಿ ನಾಲ್ಕು ಕಡೆ 110 ಕೆವಿ ವಿದ್ಯುತ್ ಉಪಕೇಂದ್ರಗಳಿಗೆ ಮಂಜೂರಾತಿ ದೊರೆತಿದೆ ಎಂದು ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಎ. ಬಿರಾದಾರ ಮತ್ತು ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಆರ್. ಮೆಡೇಗಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಗೂರ ಇನಾಂ, ತಾಂಬಾ, ಹಡಲಸಂಗ ಮತ್ತು ಅಗಸನಾಳಗಳಲ್ಲಿ ಮಂಜೂರಾತಿ ಆಗಿವೆ. ನಿಂಬಾಳ 110 ಕೆವಿ ಉಪಕೇಂದ್ರ ಪ್ರಗತಿ ಹಂತದಲ್ಲಿದೆ ಎಂದರು.
ಕೇಂದ್ರ ಸ್ಥಾಪನೆಗೆ ಖಾಸಗಿಯವರಿಂದ ಜಾಗ ಪಡೆಯಲಾಗಿದೆ. ತಾಂತ್ರಿಕ ತಂಡದಿಂದ ಜಾಗ ಪರಿಶೀಲನೆ ಮಾತ್ರ ಬಾಕಿ ಇದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಹಂತ ಹಂತವಾಗಿ ಕಾಮಗಾರಿ ಆರಂಭಿಸಲು ಗಮನ ಹರಿಸಲಾಗುವುದು ಎಂದರು.
ಈಗಾಗಲೇ ಇಂಡಿ ಎರಡು, ಹಿರೇಬೇವನೂರ, ಲಚ್ಯಾಣ, ಅಥರ್ಗಾ, ತಡವಲಗಾ, ನಾದ ಕೆಡಿ, ತಾಂಬಾ, ಝಳಕಿ, ಹೊರ್ತಿ, ರೋಡಗಿ, ಮಸಳಿ, ನಿಂಬಾಳ, ಸಾತಲಗಾಂವ ಕ್ರಾಸ್, ಬೆರುಣಗಿ 110 ಕೆ.ವಿ ಕೇಂದ್ರಗಳು ಈಗಾಗಲೇ ಚಾಲ್ತಿಯಲ್ಲಿವೆ. ರಾಜ್ಯದಲ್ಲೇ ವಿಜಯಪುರ ಜಿಲ್ಲೆಗೆ ಹೆಚ್ಚು ಕೇಂದ್ರಗಳು ಮಂಜೂರಾಗಿದ್ದು ಇಂಡಿ ತಾಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ಉಪಕೇಂದ್ರ ಮಂಜೂರಾತಿ ಪಡೆದು ಪ್ರಥಮ ಸ್ಥಾನದಲ್ಲಿದೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಕರ್ನಾಟಕ ವಿದ್ಯುತ್ ಪ್ರಸಾರ ನಿಗಮ ಇವರ ಪ್ರಯತ್ನದಿಂದ ಇಂಡಿ ತಾಲೂಕಿಗೆ ನಾಲ್ಕು ಉಪಕೇಂದ್ರಗಳು ಮಂಜೂರಾಗಿವೆ ಎಂದರು.
ಈ ಕಾರ್ಯದಲ್ಲಿ ಸಹಕರಿಸಿದ ಕೆಪಿಟಿಸಿಎಲ್ ಅಧಿಕಾರಿಗಳು ಹಾಗೂ ತಂಡದವರು ಮತ್ತು ಇಂಡಿಯ ಸಿಬ್ಬಂದಿ ಕಾರ್ಯ ಶ್ಲಾನೀಯ ಎಂದರು.
ಕೆಲವೆಡೆ 33/11ಕೆ.ವಿ ಮತ್ತೆ ಕೆಲವೆಡೆ 66/11 ಕೆ.ವಿ ಕೇಂದ್ರ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಉಪಕೇಂದ್ರ ಸ್ಥಾಪನೆಯಿಂದ ವೋಲ್ಟೇಜ್ ಸಮಸ್ಯೆ, ವಿದ್ಯುತ್ ಅಡಚಣೆ ಮೊದಲಾದ ತೊಡಕುಗಳು ಪರಿಹಾರವಾಗಲಿವೆ. ಕೃಷಿ, ತೋಟಗಾರಿಕೆ, ಕೈಗಾರಿಕೆ ಚಟುವಟಿಕೆಗೆ ಅನುಕೂಲವಾಗಲಿದೆ ಎಂದರು.