ನಂದ್ರಾಳ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ 
ಜಿಲ್ಲೆ

ನರಕ ದರ್ಶನದ ಅನುಭವ ನೀಡುವ ದಾರಿ

Vijayapura - Desk - Shamarao Kulkarni

ಹೊರ್ತಿ: ನಾಗಠಾಣ ಮತೇತ್ರದ ವ್ಯಾಪ್ತಿಯಲ್ಲಿ ಬರುವ ನಂದ್ರಾಳ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಪ್ರಯಾಣಿಸಿದರೆ ನರಕಯಾತನೆ ಅನುಭವ ಆಗುವುದು ಗ್ಯಾರಂಟಿ.

ರಸ್ತೆಯಲ್ಲಿ ಆಳುದ್ದ ತಗ್ಗು&ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

9 ಕಿ.ಮೀ. ಹದಗೆಟ್ಟ ರಸ್ತೆಯು ಚಡಚಣ ಮತ್ತು ಇಂಡಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆೆಯಲ್ಲಿ ಸಂಚರಿಸಬೇಕಾದರೆ ಸರ್ಕಸ್​ ಮಾಡಿದಂತಾಗುತ್ತದೆ. ಶಾಸಕರೇ ಇತ್ತ ಸ್ವಲ್ಪ ಗಮನ ಹರಿಸಿ, ಶಾಸಕರಾಗಿ ಮೂರು ವರ್ಷ ಗತಿಸಿದರೂ ರಸ್ತೆ ದುರಸ್ತಿ ಗೋಜಿಗೆ ಹೋಗಿಲ್ಲ. ಗ್ರಾಮಸ್ಥರು ಸಮಸ್ಯೆ ಯಾರ ಮುಂದೆ ಹೇಳಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಹದಗೆಟ್ಟ ರಸ್ತೆಯಲ್ಲಿ ಶಾಲಾ ವಾಹನಗಳು ಸಂಚರಿಸುವುದು ಕಷ್ಟ ಸಾಧ್ಯವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡ ಉದಾರಣೆಗೇನೂ ಕಡಿಮೆ ಇಲ್ಲ.

ಮಳೆ ಬಂದರಂತೂ ರಸ್ತೆ ತುಂಬೆಲ್ಲ ನೀರು ಆವರಿಸಿ ಸಂಚಾರಕ್ಕೆ ಸಂಚಕಾರ ಉಂಟು ಮಾಡುತ್ತದೆ.

ಈ ಮಾರ್ಗವಾಗಿ ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಗ್ರಾಮಸ್ಥರು ಸಾಕಷ್ಟು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ರಸ್ತೆ ಯಾವಾಗ ದುರಸ್ತಿಯಾಗುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಶಾಸಕರು ಗಮನ ಹರಿಸಿ ಶ್ರೀ ರಸ್ತೆ ದುರಸ್ತಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.