ಇಂಡಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಣಾ ವೇದಿಕೆ ಮೇ 5 ರಂದು ನೀಡಿದ್ದ ಇಂಡಿ ಬಂದ್ ಕರೆಯನ್ನು ಅಧಿಕಾರಿಗಳ ಸೂಕ್ತ ಭರವಸೆ ಮೇರೆಗೆ ವಾಪಸ್ ಪಡೆಯಲಾಗಿದೆ ಎಂದು ಕರವೆ ತಾಲೂಕು ಅಧ್ಯಕ್ಷ ಬಾಲು ಮುಳಜಿ ತಿಳಿಸಿದ್ದಾರೆ.
ಭಾನುವಾರ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರ ಅಧ್ಯತೆಯಲ್ಲಿ ನಡೆದ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಎಸಿ ಅನುರಾಧಾ ವಸ್ತ್ರದ ಅವರು ಮಾತನಾಡಿ, ತೊಗರಿ ಬೆಳೆ ಹಾನಿ ಪರಿಹಾರ ನೀಡಬೇಕು, ಇಂಡಿ ಶಾಖಾ ಕಾಲುವೆಗೆ ನೀರು ಹರಿಸಬೇಕೆಂದು ಕರವೆ ಆಗ್ರಹಿಸಿದೆ. ತೊಗರಿ ಬೆಳೆಗೆ ಪರಿಹಾರ ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅದು ಸರ್ಕಾರದ ಮಟ್ಟದಲ್ಲಿ ನಿರ್ಧಾವಾಗಬೇಕಿದೆ. ಸರ್ಕಾರ ಇಂದಿನಿಂದಲೇ ಇಂಡಿ ಶಾಖಾ ಕಾಲುವೆಗೆ ನಾರಾಯಣಪುರ ಜಲಾಶಯದಿಂದ ಒಂದು ವಾರ (4ರಿಂದ 12ರ ವರೆಗೆ) 1.5 ಟಿ.ಎಂ.ಸಿ ನೀರು ಹರಿಬಿಟ್ಟಿದೆ. ಹೀಗಾಗಿ ಬಂದ್ ವಾಪಸ್ ಪಡೆಯಬೇಕು ಎಂದು ಹೇಳಿದರು.
ಕರವೆ ಅಧ್ಯ ಬಾಳು ಮುಳಜಿ ಮಾತನಾಡಿ, ನಾವು ಈಗಾಗಲೇ 4 ದಿವಸ ಅಹೋ ರಾತ್ರಿ ಹೋರಾಟ ಮಾಡಿದ್ದೇವೆ. ಆ ಸಂದರ್ಭದಲ್ಲಿ ಬಂದು ನಮಗೆ ಆಶ್ವಾಸನೆ ನೀಡಿದ ಪ್ರಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಶಾಖಾ ಕಾಲುವೆಗೆ ನೀರು ಹರಿಸಲು ಕ್ರಮ ಕೈಗೊಂಡಿದ್ದರಿಂದ ಅನ್ನದಾತರ ಪರವಾಗಿ ನಡೆಸಬೇಕಿದ್ದ ಇಂಡಿ ಬಂದ್ ಹೋರಾಟ ವಾಪಸ್ ಪಡೆದುಕೊಳ್ಳುವುದಾಗಿ ಘೋಷಿಸಿದರು.
ಪಿಎಸ್ಐ ಸೋಮಶೇಖರ್ ಗೆಜ್ಜಿ, ಸುನೀಲಗೌಡ ಬಿರಾದಾರ, ರೈತ ಮುಖಂಡ ಮಲ್ಲು ಗುಡ್ಲ, ಮಹೇಶ ಹೂಗಾರ, ಧರ್ಮರಾಜ ಸಾಲೋಟಗಿ, ಅಶೋಕ ಅಕಲಾದಿ, ಪ್ರಶಾಂತ ಲಾಳಸಂಗಿ, ಮಲ್ಲು ಗುಡ್ಲ, ಸಚಿನ್ ನಾವಿ, ಸಿದ್ದು ಡಂಗಾ, ಶಿವಾನಂದ ಮಡಿವಾಳ, ಶಿವಾನಂದ ಲಕ್ಕುಂಡಿಮಠ, ಮಂಜು ದೇವರ, ಶ್ರೀಕಾಂತ ಬಡಿಗೇರ, ಗಿರೀಶ ಪಾಟೀಲ್, ಅಶೋಕಗೌಡ ಬಿರಾದರ, ಕಲ್ಲಣ್ಣ ಮೋಸಲಗಿ, ಗದಗಯ್ಯ ಹಿರೇಮಠ, ಆದಿತ್ಯ ಶಿಂಧೆೆ, ಅರವಿಂದ ಪಾಟೀಲ, ಅಪ್ಪು ಚಂಡಕೆ, ವಿಜಯಕುಮಾರ ರಾಠೋಡ ಇದ್ದರು.