ಆಲಮಟ್ಟಿ: ಬೆಳ್ಳಂಬೆಳಿಗ್ಗೆ ನೂರಾರು ದೇವ, ದೇವತೆಗಳ ಪಲ್ಲಕ್ಕಿಗಳ ಮಹಾಪೂರವೇ ಹರಿದು ಬಂದವು. ಕೃಷ್ಣಾ ನದಿ ತೀರದತ್ತ ಲಗ್ಗೆಯಿರಿಸಿ ಭಕ್ತಿ ಭಾವ ರಸಗಳ ಪರಿಮಳ ಬೀರಿದವು. ಎಲ್ಲೆಲ್ಲೂ ಪಲ್ಲಕ್ಕಿಗಳ ಕಲರವ. ಕೃಷ್ಣೆಯ ಪವಿತ್ರ ಜಲ ಸಿಂಚನದಲ್ಲಿ ದೈವ ಪಲ್ಲಕ್ಕಿಗಳ ಪುಣ್ಯಸ್ನಾನ ನೋಡುವುದೇ ಒಂದು ಸುಂದರ ಅನುಭವದಂತಿತ್ತು.
ಡೊಳ್ಳಿನ ನಿನಾದ. ಸಹಸ್ರಾರು ಜನರು ಪಲ್ಲಕ್ಕಿಯಲ್ಲಿ ದೇವರ ಮೂರ್ತಿ ತರುತ್ತಿರುವ ದೃಶ್ಯ, ಪಲ್ಲಕ್ಕಿಗಳ ಸ್ನಾನ, ಗುಂಪಾಗಿ ಅಡುಗೆ ಮಾಡಿ, ನೈವೇದ್ಯ ಸಮರ್ಪಿಸುವ ದೃಶ್ಯ ಕಂಡುಬಂದಿತು. ಭಾರತೀಯ ಪರಂಪಂರೆಯ ಪ್ರಕಾರ ಯುಗಾದಿಯಿಂದ ಹೊಸ ವರ್ಷ ಆರಂಭ. ಯುಗಾದಿಯು ವರ್ಷದ ಮೊದಲ ಹಬ್ಬ. ಧಾರ್ಮಿಕ ಚೌಕಟ್ಟಿನಲ್ಲಿ ವಿಶೇಷ ಮಹತ್ವ ಹೊಂದಿರುವ ಈ ದಿನ ಹೊಸ ವರ್ಷಕ್ಕೆ ಮುನ್ನುಡಿ ಬರೆದಿದೆ. ಹಾಗಾಗಿ ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಲ್ಲಿ ದೇವರ ಉತ್ಸವ ಮೂರ್ತಿಗಳಿಗೆ ಸ್ನಾನ ಮಾಡಿಸುವುದು ಉತ್ತರ ಕರ್ನಾಟಕದ ಸಂಪ್ರದಾಯ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿ ಗ್ರಾಮಗಳ ದೇವರ ಉತ್ಸವ ಮೂರ್ತಿಗಳನ್ನು, ಪಲ್ಲಕ್ಕಿಗಳನ್ನು ಊರಿನ ಜನರು ಸೇರಿ ಡೊಳ್ಳು ಬಾರಿಸುತ್ತ ಆಲಮಟ್ಟಿ ಅಣೆಕಟ್ಟೆಗೆ ಆಗಮಿಸಿದ್ದರು. ನದಿಯ ಎರಡು ದಂಡೆಯ ಮೇಲೆ ಛತ್ರಿ, ಚಾಮರ, ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ,ಕೊಂಬು ಊದುವುದು ಸೇರಿದಂತೆ ನಾನಾ ಬಗೆಯ ಸದ್ದುಗಳು ಮಾರ್ಧನಿಸಿದವು. ಭಕ್ತಿಯ ಭಾವುಕತೆಯಲ್ಲಿ ತೇಲಿಸಿದವು.
ಅಮಾವಾಸ್ಯೆ ಮುನ್ನಾ ದಿನ ರಾತ್ರಿ ಒಂದು ದಿನ ವಸತಿ ಇದ್ದು, ಕೃಷ್ಣೆಯಲ್ಲಿ ಯುಗಾದಿ ಅಮಾವಾಸ್ಯೆ ಇಲ್ಲವೇ ಯುಗಾದಿ ಪಾಡ್ಯ ದಿನದಂದು ಮೂರ್ತಿಗಳಿಗೆ ಸ್ನಾನ ಮಾಡಿಸಿ, ತಾವೂ ಸ್ನಾನ ಮಾಡಿ ಮರಳಿ ಹೋಗುತ್ತಾರೆ ಭಕ್ತರು. ಈ ಸಂಪ್ರದಾಯಕ್ಕೆ ಸುಮಾರು ಆರು ದಶಕಗಳ ಇತಿಹಾಸವಿದೆ.ಇಂಡಿ, ಜಮಖಂಡಿ, ಸಿಂದಗಿ, ಬಾಗೇವಾಡಿ, ಮುದ್ದೇಬಿಹಾಳ, ಬಾಗಲಕೋಟೆ, ಬೀಳಗಿ ಸೇರಿ ಅನೇಕ ಗ್ರಾಮಗಳ ದೇವರು ಆಲಮಟ್ಟಿಗೆ ಬರುವುದು ಹಿಂದಿನಿಂದ ಬಂದ ವಾಡಿಕೆ.
ಅಮಾವಾಸ್ಯೆ ದಿನ ಪಲ್ಲಕ್ಕಿಗಳನ್ನು ಕೃಷ್ಣೆಯ ಪವಿತ್ರ ಜಲದಿಂದ ಪಾವನಗೊಳಿಸಿ ಪೂಜಿಸಲಾಯಿತು.
ಜಾತಿ ಭೇದವಿಲ್ಲದೇ ಎಲ್ಲ ಜಾತಿಯ ದೇವರು ಇಲ್ಲಿ ಆಗಮಿಸಿದ್ದು ವಿಶೇಷ. ಬಂದ ಯುವಕ, ಯುವತಿಯರು, ಹಿರಿಯರೆಲ್ಲರೂ ಕಷ್ಣೆಯಲ್ಲಿ ಸ್ನಾನ ಮಾಡಿ, ಮಡಿಯಲ್ಲಿಯೇ ದೇವರ ಮೂರ್ತಿಶುಚಿಗೊಳಿಸಿ ನಂತರ ಪಲ್ಲಕ್ಕಿಗಳನ್ನು ಹೂವಿನಿಂದ ಅಲಂಕರಿಸಿದರು.