ಹುನಗುಂದ: ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರ್ಕಾರ ಸಾಕಷ್ಟು ಕಾನೂನು ಮತ್ತು ಯೋಜನೆಗಳ ಮೂಲಕ ಸೌಲಭ್ಯ ಒದಗಿಸುತ್ತಿದೆ. ಅವುಗಳ ಮೂಲಕ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಹಯೋಗದಿಂದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ 10 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅರಿವು ಕಾರ್ಯಕ್ರಮ, ಹೆಣ್ಣು ಮಕ್ಕಳ ಜನ್ಮ ದಿನ ಆಚರಣೆ, ಪೊಕ್ಸೋ ಕಾಯ್ದೆ, ಬಾಲ್ಯ ವಿವಾಹ ಹಾಗೂ ಮಕ್ಕಳ ಹಕ್ಕುಗಳ ಕುರಿತು ನಡೆದ ಕಾರ್ಯಗಾರವನ್ನು ಉದ್ಘಾಟಿಸಿಅವರು ಮಾತನಾಡಿದರು. ಸಾಮಾಜಿಕ ನ್ಯಾಯ ಮಾನದಂಡದಲ್ಲಿ ಮಕ್ಕಳ ಅಭಿವೃದ್ಧಿಗೆ ಆದ್ಯತೆ ನೀಡಿ, ಪಾಲಕರು ಅವರ ಬಾಲ್ಯ ಮತ್ತು ಹಕ್ಕುಗಳನ್ನು ಕಸಿಯದೆ ವಿದ್ಯಾವಂತರಾಗಿ ಬೆಳೆಸಬೇಕು ಎಂದರು.
ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ಅಧ್ಯಕ್ಷತೆವಹಿಸಿ ಮಾತನಾಡಿ, ಮನುಕುಲಕ್ಕೆ ಅತ್ಯುತ್ತಮ ಕೊಡುಗೆ ಮತ್ತು ರಾಷ್ಟ್ರದ ಅತ್ಯಮೂಲ್ಯ ಆಸ್ತಿ ಮಕ್ಕಳು, ಅವರನ್ನು ಬಾಲ್ಯ ವಿವಾಹದಿಂದ ಅವರನ್ನು ರಕ್ಷಿಸುವ ಕೆಲಸವಾಗಬೇಕು. ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಅದರನ್ವಯ ಕಡ್ಡಾಯ ಶಿಕ್ಷಣ ಒದಗಿಸಬೇಕು ಎಂದರು.
ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯವಾದಿ ಭಾರತಿ ಬಜಂತ್ರಿ, ಶಂಕ್ರಮ್ಮ ಜುಮ್ಮನಕಟ್ಟಿ, ಸೀಮಾ ಚಲವಾದಿ, ಸುರೇಶ ಹುಲಮನಿ, ಪೊಲೀಸ್ ಇಲಾಖೆಯ ಎಚ್.ವೈ ಈಟಗಿ, ಸಮಾಜ ಕಲ್ಯಾಣ ಇಲಾಖೆಯ ಆರ್.ಬಿ. ದಿಡ್ಡಿಬಾಗಿಲ, ತಾಪಂ ಸಹಾಯಕ ನಿರ್ದೇಶಕ ಮಹಾಂತೇಶ ಕೋಟಿ ಇದ್ದರು. ವಿಜಯಾ ಶಿರೂರ ನಿರೂಪಿಸಿದರು, ನೇತ್ರಾವತಿ ಬಡಿಗೇರ ವಂದಿಸಿದರು.