ಮುದ್ದೇಬಿಹಾಳ: ದಾನ, ದಾಸೋಹದ ಕಾರ್ಯಗಳನ್ನು ನಿಸ್ವಾರ್ಥದಿಂದ ಮಾಡುವವರು ಪುಣ್ಯ ಸಂಪಾದಿಸುತ್ತಾರೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಹೇಳಿದರು.
ಹುಡ್ಕೋದ ಗವಿಸಿದ್ಧೇಶ್ವರ ವೇದಿಕೆಯಲ್ಲಿ ಹಾನಗಲ್ ಶ್ರೀ ಕುಮಾರೇಶ್ವರ ಶಿವಯೋಗಿಗಳು, ತುಮಕೂರು ಸಿದ್ಧಗಂಗಾಮಠದ ಶಿವಕುಮಾರ ಮಹಾಸ್ವಾಮಿಗಳು, ಮಡಿಕೇಶ್ವರದ ಚನ್ನಣ್ಣ ದೇಸಾಯಿ ಸ್ಮರಣಾರ್ಥ ವಿಶ್ವ ದಾಸೋಹ ದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ದಾಸೋಹ ಸೇವೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಅನೇಕ ಶ್ರೀಮಂತರಿದ್ದರೂ ಹಲವರಿಗೆ ದಾನ ಮಾಡುವ ಮನಸ್ಸಿರುವುದಿಲ್ಲ. ಆದರೆ, ತಾವು ದುಡಿದಿದ್ದರಲ್ಲಿ ಒಂದಷ್ಟನ್ನು ದಾಸೋಹಕ್ಕೆ ಮೀಸಲಿಡುವವರು ಇರುವುದರಿಂದ ಸಮಾಜದಲ್ಲಿ ಇನ್ನೂ ಸೇವಾ ಮನೋಭಾವ ಉಳಿದುಕೊಂಡಿದೆ ಎಂದರು.
ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಕಾಯಕ, ದಾಸೋಹ ಎರಡು ಮಹತ್ವದ ಕಾರ್ಯಗಳಾಗಿದ್ದು, ಅವುಗಳಿಂದ ಜೀವನದ ತೃಪ್ತಿ ನಿರ್ಧಾರವಾಗುತ್ತದೆ. ಅಂತರಂಗ, ಬಹಿರಂಗ ಶುದ್ಧಿಯಲ್ಲಿ ತೊಡಗಿಕೊಂಡ ತಂದೆ, ತಾಯಂದಿರ ಉತ್ತಮ ಸಂಸ್ಕಾರ ಮಕ್ಕಳ ಮೇಲೆ ಪ್ರಭಾವ ಬೀರಿ ಸಮಾಜಮುಖಿ ಸೇವೆಗೆ ಅವಕಾಶ ಮಾಡಿಕೊಡುತ್ತವೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಪ್ರತಿ ವರ್ಷ ವಿಶ್ವ ದಾಸೋಹ ದಿನದಂದೇ ನಮ್ಮ ತಂದೆ ಚನ್ನಣ್ಣನವರ ಸ್ಮರಣೋತ್ಸವ ಇದ್ದು, ಹಾನಗಲ್ ಶಿವಯೋಗಿಗಳು, ಸಿದ್ಧಗಂಗೆಯ ಮಹಾಸ್ವಾಮಿಗಳ ಪವಿತ್ರ ಸನ್ನಿಧಾನದಲ್ಲಿ ಸಾಮೂಹಿಕವಾಗಿ ಆಚರಿಸಿ ದಾಸೋಹ ಸೇವೆಗೈಯಲು ಅವಕಾಶ ದೊರೆತಿರುವುದು ಪುಣ್ಯದ ಲ ಎಂದರು.
ಗುಳೇದಗುಡ್ಡ ಮುರುಘಾಮಠದ ಕಾಶೀನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಕವಡಿಮಟ್ಟಿಯ ಬಸವಪ್ರಭು ಹಿರೇಮಠ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ಆರ್.ಎಸ್. ಪಾಟೀಲ ವೇದಿಕೆಯಲ್ಲಿದ್ದರು.
ವಾಣಿಜ್ಯ ಮಂಡಳಿಗೆ ಆಯ್ಕೆಯಾದ ಉದ್ಯಮಿ ಸಿ.ಪಿ. ಸಜ್ಜನ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಗೊಂಡ ಪ್ರಭುದೇವ ಕಲಬುರ್ಗಿ, ಬ್ಯಾಂಕ್‌ನ ವೃತ್ತಿಪರ ನಿರ್ದೇಶಕರಾಗಿ ನೇಮಕವಾದ ನಾಗಭೂಷಣ ನಾವದಗಿ, ರವಿ ಗೂಳಿ ಹಾಗೂ ಢವಳಗಿ ಪಿಕೆಪಿಎಸ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ರಾಜು ಗೌಡರ ಅವರನ್ನು ಸನ್ಮಾನಿಸಲಾಯಿತು.
ಗಂಗಾಧರ ಪತ್ತಾರ ಪ್ರಾರ್ಥಿಸಿದರು, ಶ್ರೀಶೈಲ ಹೂಗಾರ ನಿರೂಪಿಸಿದರು ಹಾಗೂ ಸಿದ್ದು ಹೆಬ್ಬಾಳ ವಂದಿಸಿದರು.