ಮೈಸೂರು: ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಮುಲ್) ಚುನಾವಣೆ ಫಲಿತಾಂಶ ನಮಗೆ ಬೇಸರ ತರಿ ಸಿಲ್ಲ. ಚುನಾವಣೆಯಲ್ಲಿ ಶಾಸಕ ಜಿ.ಟಿ. ದೇವೇಗೌಡರ ಓಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯಶಸ್ವಿಯಾಗಿದೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ನನ್ನ ಬೆಂಬಲಿಗರನ್ನು ನಿರ್ನಾಮ ಮಾಡಲು ಜಿ.ಟಿ. ದೇವೇಗೌಡ ಹೊರಟ್ಟಿದ್ದರು. ಇದೇ ಉದ್ದೇಶ ಇಟ್ಟುಕೊಂಡು ಜೆಡಿಎಸ್ ಕಾರ್ಯಕರ್ತರನ್ನು ತಮ್ಮ ಬಣಕ್ಕೆ ಸೇರಿಸಿಕೊಳ್ಳದೆ ಕೇವಲ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಸೇರಿಸಿಕೊಂಡು ಗುಂಪು ರಚಿಸಿದರು. ಒಂದು ವೇಳೆ ಜೆಡಿಎಸ್ ಕಾರ್ಯಕರ್ತರು ಸ್ಪರ್ಧಿಸದೆ ಹೋಗಿದ್ದರೆ ಜಿ.ಟಿ. ದೇವೇಗೌಡರ ಬಣ ಅವಿರೋಧವಾಗಿ ಆಯ್ಕೆ ಆಗುತಿತ್ತು. ಆದರೆ ಅದಕ್ಕೆ ನಾವು ಅವಕಾಶ ಮಾಡಿಕೊಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾವು ಕೇವಲ ಮೂರು ಕ್ಷೇತ್ರಗಳಲ್ಲಿ ಗೆದ್ದಿರಬಹುದು. ಆದರೆ, ಜಿ.ಟಿ. ದೇವೇಗೌಡರ ಓಟಕ್ಕೆ ರೋಡ್ ಹಂಪ್ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ಎರಡು ರಾಷ್ಟ್ರೀಯ ಪಕ್ಷ (ಬಿಜೆಪಿ, ಕಾಂಗ್ರೆಸ್), ರಾಜ್ಯ ಸರ್ಕಾರದ ಬೆಂಬಲ, ಜಿ.ಟಿ. ದೇವೇಗೌಡರು ಸಹಕಾರ ಕ್ಷೇತ್ರದ ಮೇಲೆ ಹೊಂದಿರುವ ಹಿಡಿತದ ಹೊರತಾಗಿಯೂ ನಾವು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಹಾಗಾಗಿ ಫಲಿತಾಂಶ ನಮಗೆ ಬೇಸರ ತರಿಸಿಲ್ಲ ಎಂದು ಹೇಳಿದರು.
‘ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೈಮುಲ್ ಚುನಾವಣಾ ಪ್ರಚಾರಕ್ಕೆ ಬರಬಾರದಿತ್ತು’ ಎಂದು ಜಿ.ಟಿ. ದೇವೇಗೌಡರು ಹೇಳಿಕೆ ನೀಡಿದ್ದಾರೆ. ಆದರೆ, ಇವರು ರಾಜಕೀಯ ಮಾಡಲಿಲ್ಲವೇ? ಜೆಡಿಎಸ್ ಕಾರ್ಯಕರ್ತರನ್ನು ಹೊರಗಿಟ್ಟು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರನ್ನು ಗೆಲ್ಲಿಸಿದ್ದು ಯಾರು? ಸರ್ಕಾರದ ಮೇಲೆ ಪ್ರಭಾವ ಬೀರಿ ಮೈಮುಲ್ ಚುನಾವಣೆಗೆ ಒಂದು ಜಿಲ್ಲೆಯನ್ನು ಎರಡು ವಿಭಾಗವನ್ನಾಗಿ ಮಾಡಿದ್ದು ಯಾರು? ಇದು ರಾಜಕೀಯವಲ್ಲವೇ ಎಂದು ಪ್ರಶ್ನಿಸಿದರು.