ಮೈಸೂರು: ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರ ನಡೆಸುವ ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ನ ಮಾನ್ಯತೆಗೆ ಸಂಬಂಧಿಸಿದಂತೆ ರಂಗಾಯಣ ಹಾಗೂ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯ ಶುಕ್ರವಾರ ರಂಗಾಯಣ ಆವರಣದಲ್ಲಿ ಒಡಂಬಡಿಕೆ ಸಹಿ ಹಾಕಿತು. ಇದುವರೆಗೆ ರಂಗಾಯಣ ಹಂಪಿ ವಿಶ್ವ ವಿದ್ಯಾಲಯದ ಮಾನ್ಯತೆಯೊಂದಿಗೆ ಡಿಪ್ಲೊಮಾ ಕೋರ್ಸ್ ನಡೆಸುತಿತ್ತು.
ಹಂಪಿ ವಿಶ್ವ ವಿದ್ಯಾಲಯ ಸಾಕಷ್ಟು ದೂರ ಇರುವ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹಂಪಿ ವಿವಿಯ ಮಾನ್ಯತೆ ಕೈಬಿಟ್ಟು ಸಂಗೀತ ವಿವಿಯ ಮಾನ್ಯತೆ ಪಡೆದಿದೆ. ಒಡಂಬಡಿಕೆಗೆ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಸಂಗೀತ ವಿವಿಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟಕೋಟೆ ಸಹಿ ಹಾಕಿದರು.
ಈ ಬಾರಿ ಒಟ್ಟು 200 ಅರ್ಜಿಗಳು ಕೋರ್ಸ್‌ಗೆ ಸಲ್ಲಿಕೆಯಾಗಿತ್ತು. ಈ ಪೈಕಿ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಜುಲೈ ತಿಂಗಳಿನಿಂದಲೇ ತರಗತಿ ಪ್ರಾರಂಭವಾಗಬೇಕಾಗಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ನ.17 ರಿಂದ ತರಗತಿಗಳು ಪ್ರಾರಂಭಗೊಳ್ಳಲಿದೆ.
ಶಾಲೆ ಪ್ರಾರಂಭೋತ್ಸವ: ಇದೇ ಸಂದರ್ಭ ಭಾರತೀಯ ರಂಗ ಶಿಕ್ಷಣ ಕೇಂದ್ರದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸಹ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶ್ ಬೆಳವಾಡಿ, ಜಗತ್ತಿನಲ್ಲಿ ಪ್ರೀತಿ ಉಳಿಯಲು ರಂಗಭೂಮಿಯ ಅವಶ್ಯಕತೆ ಇದೆ. ಈ ಮಾತು ಉತ್ಪ್ರೇಕ್ಷೆ ಅನಿಸಿದರೂ ವಾಸ್ತವವಾಗಿದೆ. ರಂಗಭೂಮಿಯಿಂದ ಪ್ರೀತಿಯನ್ನು ಬಿತ್ತಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.