ಜಿಲ್ಲೆ

ಮೈಸೂರಿನಲ್ಲಿ ತರಕಾರಿಗೆ ಕರೊನಾ ಆತಂಕ!

Mysuru
  • ಕೇರಳಕ್ಕೆ ಕಡಿಮೆಯಾಗುತ್ತಿದೆ ಪೂರೈಕೆ
  • ಎಲ್ಲ ವಸ್ತುಗಳ ಬೆಲೆ ಏರಿಕೆ, ರೈತರ ಬೆಳೆಗೆ ದರ ಇಳಿಕೆ
  • ವಹಿವಾಟು ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ ಕೃಷಿಕರು

ಸದೇಶ್ ಕಾರ್ಮಾಡ್ ಮೈಸೂರು
ಕಳೆದ ವರ್ಷ ಕರೊನಾ ಸೋಂಕು, ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ರೈತರು ಈ ಬಾರಿಯೂ ಅಂಥದೊಂದು ಆತಂಕವನ್ನು ಎದುರಿಸಲು ಪ್ರಾರಂಭಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪ್ರಸ್ತುತ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಗಲು ಪ್ರಾರಂಭವಾಗಿದೆ. ಆದರೆ, ತರಕಾರಿ ಬೆಲೆ ಮಾತ್ರ ಇಳಿಮುಖದ ಹಾದಿಯಲ್ಲಿದೆ.

ಮೈಸೂರು ಭಾಗದಲ್ಲಿ ಬೆಳೆಯುವ ಬಹುತೇಕ ತರಕಾರಿಗಳು ಕೇರಳಕ್ಕೆ ಪೂರೈಕೆಯಾಗುತ್ತವೆ. ಕೇರಳ ಮಾರುಕಟ್ಟೆಯನ್ನೇ ನೆಚ್ಚಿಕೊಂಡು ಇಲ್ಲಿ ರೈತರು ಬೆಳೆಗಳನ್ನು ಬೆಳೆಯುತ್ತಾರೆ. ಆದರೆ, ಕರೊನಾ ಎರಡನೇ ಅಲೆ ಕೇರಳದಲ್ಲಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕೂಡ ಕುಸಿತ ಕಾಣಲು ಪ್ರಾರಂಭಿಸಿದ್ದು, ಇದು ಮುಂದಿನ ದಿನಗಳಲ್ಲಿ ರೈತರ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.

ನಿತ್ಯ ಮೈಸೂರಿನಿಂದ ಕೇರಳಕ್ಕೆ ತರಕಾರಿಗಳನ್ನು ಲಾರಿಗಳಲ್ಲಿ ಕೊಂಡೊಯ್ಯಲಾಗುತ್ತದೆ. ಕೇರಳದ ವರ್ತಕರೂ ಇಲ್ಲಿಗೆ ಬಂದು ಲಾರಿಗಳಲ್ಲಿ ತರಕಾರಿ ಕೊಂಡೊಯ್ಯುತ್ತಾರೆ. ಆದರೆ, ಕರೊನಾ ಎರಡನೇ ಅಲೆಯ ನಂತರ ತರಕಾರಿ ವಾಹನಗಳ ಸಂಖ್ಯೆ ಸಂಚಾರ ಕಡಿಮೆಯಾಗಿದೆ. ಮೈಸೂರು-ಕೇರಳ ನಡುವೆ ನಿತ್ಯ ನೂರಾರು ಸಂಖ್ಯೆಯಲ್ಲಿ ತರಕಾರಿ ವಾಹನಗಳು ಸಂಚರಿಸುತ್ತವೆ. ಇದೀಗ ಈ ವಾಹನಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಕರೊನಾ ಸೋಂಕು ಮತ್ತಷ್ಟು ಉಲ್ಬಣಗೊಂಡರೆ ತರಕಾರಿ ಪೂರೈಕೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಕೇರಳಕ್ಕೆ ಪೂರೈಕೆಯಾಗುತ್ತಿದ್ದ ತರಕಾರಿ ಪ್ರಮಾಣ ಕಡಿಮೆಯಾಗಿರುವುದು ಒಂದೆಡೆಯಾದರೆ, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡಿದ್ದು, ಹೀಗಾಗಿ ಹೋಟೆಲ್ ಮಾಲೀಕರು ಖರೀದಿಸುತ್ತಿರುವ ತರಕಾರಿ ಪ್ರಮಾಣದಲ್ಲೂ ಇಳಿಕೆ ಕಂಡಿದೆ. ತರಕಾರಿ ಬೆಲೆ ಏರಿಕೆ ಕಾಣದೆ ಇರಲು ಕರೊನಾ ಎರಡನೇ ಅಲೆಯ ಭೀತಿಯೇ ಪ್ರಮುಖ ಕಾರಣ. ಜನವರಿಯಲ್ಲಿ ಒಂದು ಕೆ.ಜಿ. ಬೀನ್ಸ್ 50 ರೂ.ಗೆ ಮಾರಾಟವಾಗಿತ್ತು. ಇದೀಗ 20 ರೂ.ಗೆ ಇಳಿಕೆ ಕಂಡಿದೆ. ಕೇರಳದಲ್ಲಿ ಹೆಚ್ಚಾಗಿ ಬಳಕೆ ಮಾಡುವ ಪೈರ್ ಜನವರಿಯಲ್ಲಿ 40 ರೂ. ಇದ್ದ ಬೆಲೆ ಇದೀಗ 20 ರೂ.ಗೆ ಕುಸಿತ ಕಂಡಿದೆ. ಅದೇ ರೀತಿ ಬೆಂಡೆ 35 ರಿಂದ 10 ರೂ.ಗೆ, ಗುಂಡುಬದನೆ 10 ರೂ.ನಿಂದ 5 ರೂ.ಗೆ ಇಳಿಕೆ ಕಂಡಿದೆ. ಟೊಮ್ಯಾಟೊ ದರ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಕಾಣುತ್ತಿಲ್ಲ. ಜನವರಿಯಲ್ಲಿ 13 ರೂ. ಇದ್ದ ಟೊಮ್ಯಾಟೊ ದರ ಇದೀಗ 7 ರೂ.ಗೆ ಇಳಿಕೆ ಕಂಡಿದೆ.

ಕಳೆದ ವರ್ಷ ರೈತರು ಕರೊನಾದ ನಿರೀಕ್ಷೆ ಇಲ್ಲದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದರು. ಆದರೆ, ಬೆಳೆದ ಬಹುತೇಕ ತರಕಾರಿಗಳಿಗೆ ಮಾರುಕಟ್ಟೆ ದೊರೆಯದೆ ಹೊಲದಲ್ಲಿಯೇ ನಾಶ ಮಾಡಿದ್ದರು. ಸಾಕಷ್ಟು ರೈತರು ಎಪಿಎಂಸಿಗೆ ತಂದು ಸೂಕ್ತ ಬೆಲೆ ದೊರೆಯದೆ ಮಾರುಕಟ್ಟೆಯಲ್ಲಿಯೇ ಸುರಿದು ಹೋದರು. ಕರೊನಾ ಎರಡನೇ ಅಲೆಯ ನಿರೀಕ್ಷೆ ಇಲ್ಲದ ರೈತರು ಈ ಬಾರಿಯೂ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿದ್ದಾರೆ. ಆದರೆ, ದಿನೇ ದಿನೆ ಸೋಂಕಿನ ಪ್ರಮಾಣ ಏರಿಕೆ ಕಾಣುತ್ತಿರುವುದು ರೈತರಲ್ಲಿ ಆತಂಕ ಮೂಡಿಸಲು ಪ್ರಾರಂಭಿಸಿದೆ.

ಕೇರಳಕ್ಕೆ ನಮ್ಮ ರೈತ ಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿಯಿಂದ ನಿತ್ಯ ತರಕಾರಿ ಪೂರೈಕೆ ಮಾಡುತ್ತಿದ್ದೆವು. ಆದರೆ, ಎರಡು ತಿಂಗಳಿನಿಂದ ತರಕಾರಿ ಪೂರೈಕೆ ಸ್ಥಗಿತಗೊಳಿಸಿದ್ದೇವೆ. ಕೇರಳ ಸರ್ಕಾರದಿಂದ ನಮಗೆ 55 ಲಕ್ಷ ರೂ. ಬರಲು ಬಾಕಿ ಇದೆ. ಅಲ್ಲದೆ, ಕೇರಳದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ತರಕಾರಿ ಬೇಡಿಕೆ ಕೂಡ ಕುಸಿತ ಕಾಣಲು ಪ್ರಾರಂಭವಾಗಿದೆ. ಕೇರಳಕ್ಕೆ ತರಕಾರಿ ಪೂರೈಸುತ್ತಿದ್ದ ವಾಹನಗಳ ಪೈಕಿ ಇದೀಗ ಶೇ.50 ರಷ್ಟು ವಾಹನಗಳು ಮಾತ್ರ ಸಂಚರಿಸುತ್ತಿವೆ.
ಕುರುಬೂರು ಶಾಂತಕುಮಾರ್ ಅಧ್ಯಕ್ಷ, ರೈತ ಮಿತ್ರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿ