ಮೈಸೂರು: ನಗರಕ್ಕೆ ಪೂರೈಕೆಯಾಗಿರುವ ಶೇ.90 ರಷ್ಟು ಪಟಾಕಿಗಳು ಪರಿಸರ ಸ್ನೇಹಿಯಾಗಿರುವ ‘ಹಸಿರು ಪಟಾಕಿ’ಗಳಾಗಿದ್ದು, ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೆ ಖರೀದಿ ಮಾಡಬೇಕೆಂದು ಹೆಬ್ಬಾಳು ಕೈಗಾರಿಕಾ ಪ್ರದೇಶ ಪಟಾಕಿ ವರ್ತಕರ ಸಂಘದ ಸದಸ್ಯ ಹರೀಶ್ ಮನವಿ ಮಾಡಿದರು.
ಈ ಬಾರಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ. ನಗರಕ್ಕೆ 2019ರಿಂದಲೇ ಹಸಿರು ಪಟಾಕಿ ಪೂರೈಕೆಯಾಗುತ್ತಿದೆ. ಹೀಗಾಗಿ ನಿಶ್ಚಿಂತೆಯಿಂದ ಜನರು ನಗರದಲ್ಲಿ ಪಟಾಕಿಗಳನ್ನು ಖರೀದಿ ಮಾಡಬಹುದೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಟಾಕಿಯಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದ ಸಂದರ್ಭ ಸುಪ್ರಿಂಕೋರ್ಟ್ ನಿರ್ದೇಶನ ಮೇರೆಗೆ ವಾಯುಮಾಲಿನ್ಯದ ಪ್ರಮಾಣ ಅಳೆಯಲಾಯಿತು. ಆ ಸಂದರ್ಭ ಒಟ್ಟು ವಾಯು ಮಾಲಿನ್ಯದ ಪೈಕಿ ಶೇ.4 ರಷ್ಟು ವಾಯು ಮಾಲಿನ್ಯ ಪಟಾಕಿಯಿಂದ ಉಂಟಾಗುತ್ತಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಪಟಾಕಿಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ತಗ್ಗಿಸಲು ಹಸಿರು ಪಟಾಕಿ ತಯಾರಿಸಲು 2019ರಲ್ಲಿ ಚಾಲನೆ ದೊರೆಯಿತು. ಈ ಹಿಂದಿನ ಪಟಾಕಿಗೆ ಹೋಲಿಸಿದರೆ ನೂತನ ಹಸಿರು ಪಟಾಕಿಯಿಂದ ಉಂಟಾಗುವ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಅತ್ಯಂತ ಕಡಿಮೆಯಾಗಿದ್ದು, ಶೇ.30 ರಿಂದ 40 ರಷ್ಟು ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಿದೆ. ಈ ಹಿಂದೆ ಪಟಾಕಿಗೆ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ಪದಾರ್ಥ ಹಾಗೂ ಹಸಿರು ಪಟಾಕಿ ತಯಾರಿಕೆಗೆ ಬಳಸುತ್ತಿರುವ ರಾಸಾಯನಿಕ ಪದಾರ್ಥಗಳು ಭಿನ್ನವಾಗಿದೆ ಎಂದರು.