ಮೈಸೂರು: ಜಿ.ಟಿ. ದೇವೇಗೌಡ ಅವರು ನನ್ನನ್ನು ಹತ್ತಾರು ಬಾರಿ ಟೀಕಿಸಿದ್ದಾರೆ. ಆದರೆ, ನಾನು ಎಲ್ಲೂ ಕೂಡ ಅವರನ್ನು ಟೀಕಿಸಿಲ್ಲ. ಇಂದಿಗೂ ಅವರ ಬಗ್ಗೆ ನನಗೆ ಗೌರವ ಭಾವನೆ ಇದೆ. ನಾನು ನಿಮ್ಮೊಂದಿಗೆ ಯಾವ ಸಂದರ್ಭದಲ್ಲೂ ಪೈಪೋಟಿಗೆ ಇಳಿದಿಲ್ಲ. ಹೀಗಿದ್ದರೂ ನನ್ನ ವಿರುದ್ಧ ಏತಕ್ಕೆ ದ್ವೇಷ ಸಾಧನೆ ಮಾಡುತ್ತಿದ್ದಿರೋ ತಿಳಿಯದು. ನನ್ನಿಂದಾಗಿ ನೀವು ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರ ಉಳಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನೀವು ಬಂದು ಪಕ್ಷಕಟ್ಟಿ ಎಂದು ಸಾ.ರಾ. ಮಹೇಶ್ ಭಾವುಕರಾಗಿ ನುಡಿದರು.
ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ, ನೀವೇ ಪಕ್ಷವನ್ನು ಮುನ್ನಡೆಸಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಅವರ ಕಾಲಿಗೆ ಬಿದ್ದು ಕೇಳಿಕೊಂಡಿದ್ದೆ. ಒಬ್ಬರು (ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್) ಚಾಮುಂಡಿಬೆಟ್ಟಕ್ಕೆ ಬಂದು ನಾನು ಕಣ್ಣೀರು ಸುರಿಸುವಂತೆ ಮಾಡಿ ನಂತರ ಅದರ ಫಲ ಅನುಭವಿಸಿದರು. ಇದೀಗ ಜಿ.ಟಿ. ದೇವೇಗೌಡರು ಚಾಮುಂಡಿಬೆಟ್ಟದಲ್ಲಿ ನಿಂತು ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಎಲ್ಲವನ್ನು ತಾಯಿ ಚಾಮುಂಡೇಶ್ವರಿ ತೀರ್ಮಾನ ಮಾಡುತ್ತಾಳೆ ಎಂದರು.
ಶಕುನಿ, ಮಂಥರೆ ಟೀಕೆಗೆ ತಿರುಗೇಟು: ಜಿ.ಟಿ. ದೇವೇಗೌಡರು ನನ್ನನ್ನು ಶಕುನಿ, ಮಂಥರೆಗೆ ಹೋಲಿಸಿದ್ದಾರೆ.ಶಕುನಿ ಇಲ್ಲದೆ ಇದ್ದಿದ್ದರೆ ಮಹಾಭಾರತವೇ ನಡೆಯುತ್ತಿರಲಿಲ್ಲ, ಧರ್ಮರಾಜ್ಯ ಸಂಸ್ಥಾಪನೆ ಆಗುತ್ತಿರಲಿಲ್ಲ, ದುಷ್ಟ ಶಕ್ತಿ ನಿರ್ನಾಮ ಆಗುತ್ತಿರಲಿಲ್ಲ. ಮಂಥರೆ ಇಲ್ಲದೆ ಇದ್ದಿದ್ದರೆ ರಾಮಾಯಣವೇ ನಡೆಯುತ್ತಿರಲಿಲ್ಲ. ಶಬರಿಯ ಶಾಪ ವಿಮೋಚನೆ ಆಗುತ್ತಿರಲಿಲ್ಲ, ರಾವಣ ನಿರ್ಮಾನ ಆಗುತ್ತಿರಲಿಲ್ಲ, ರಾಮ ರಾಜ್ಯ ಸಂಸ್ಥಾಪನೆ ಆಗುತ್ತಿರಲಿಲ್ಲ ಎಂದು ಸಾ.ರಾ. ಮಹೇಶ್ ತಿರುಗೇಟು ನೀಡಿದರು.