ಜಿಲ್ಲೆ

ಅರಮನೆ ಆವರಣದಲ್ಲಿ ಇನ್ನು ಮುಂದೆ ವರ್ಷದ 365 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ

Mysuru

ಮೈಸೂರು: ಅರಮನೆ ಆವರಣದಲ್ಲಿ ವರ್ಷದ 365 ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪ್ರವಾಸೋದ್ಯಮ ಕುರಿತು ಹಮ್ಮಿಕೊಂಡ ಸಂವಾದದಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವದ ಪ್ರಮುಖ ಪ್ರವಾಸಿ ತಾಣವಾದರೂ ಸಹ ಇಲ್ಲಿಗೆ ಬರುವ ಸಾಕಷ್ಟು ಪ್ರವಾಸಿಗ ರಿಗೆ ನಿರಾಶೆ ಇದೆ. ಕೇವಲ ಅರಮನೆ ಹಾಗೂ ಒಂದೆರಡು ತಾಣಗಳು ಮಾತ್ರ ವೀಕ್ಷಿಸಿ ತೆರಳುತ್ತಾರೆ. ಹೀಗಾಗಿ ಪ್ರವಾಸಿಗರು ಒಂದು ದಿನ ಮೈಸೂರಿನಲ್ಲಿ ಕಳೆಯುವಂತೆ ಮಾಡಲು ಅರಮನೆ ಆವರಣದಲ್ಲಿ ವರ್ಷದ 365 ದಿನಗಳು ಸಹ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸ ಲಾಗುವುದು ಎಂದು ಹೇಳಿದರು.

ನಗರದ ವಸ್ತು ಪ್ರದರ್ಶನ ಆವರಣ 365 ದಿನಗಳು ಸಹ ಚಟುವಟಿಕೆಯ ತಾಣವಾಗಬೇಕೆಂಬ ಉದ್ದೇಶದೊಂದಿಗೆ ಎಗ್ಸಿಬಿಷನ್ ಸೆಂಟರ್ ನಿರ್ಮಾಣ ಮಾಡಲಾಗುವುದು. ಇದು 150 ರಿಂದ 200 ಕೋಟಿ ರೂ. ಮೊತ್ತದ ಯೋಜನೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.