ಚನ್ನರಾಯಪಟ್ಟಣ : ಪುನೀತ್ ರಾಜ್‌ಕುಮಾರ ಅವರ ಸಿನಿಮಾಗಳು ಹಲವು ಜನರಿಗೆ ಪ್ರೇರಣೆಯಾಗಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಯತೀಶ್ ಕುಮಾರ್ ಹೇಳಿದರು.
ಪಟ್ಟಣದ ಡಾ.ಪುನೀತ್ ರಾಜ್‌ಕುಮಾರ್ ಉದ್ಯಾನವನದಲ್ಲಿ ಅಪ್ಪು ಜನ್ಮದಿನದ ಅಂಗವಾಗಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪುನೀತ್ ಕೇವಲ ನಟರಾಗಿರಲಿಲ್ಲ, ಅವರೊಬ್ಬ ಮಾದರಿ ಪುರುಷ. ಅವರ ಸರಳತೆ, ಮುಗ್ಧತೆ ಮಾದರಿಯಾಗಿದೆ.
ಅವರ ಪೃಥ್ವಿ ಸಿಮಿಮಾ ನಮ್ಮಂಥ ಎಷ್ಟೋ ಅಧಿಕಾರಿಗಳಿಗೆ ಪ್ರೇರಣೆಯಾಗಿದೆ ಎಂದರು. ಪುನೀತ್ ಉದ್ಯಾನವನಕ್ಕೆ ಬೇಕಿರುವ ಮೂಲ ಸೌಕರ್ಯಗಳನ್ನು ಅಳವಡಿಸಿ ಮಕ್ಕಳಿಗೆ ಆಟವಾಡಲು ಕ್ರೀಡಾ ಸಾಧನಗಳನ್ನು ಅಳವಡಿಸಲಾಗುವುದು ಎಂದವರು ಭರವಸೆ ನೀಡಿದರು.
ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಮಾತನಾಡಿ, ಪುನೀತ್ ಅವರು ಹೆಚ್ಚುಕಾಲ ಬದುಕಿದ್ದರೆ ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೆ ಬೆಳೆಯುತ್ತಿತ್ತು ಎಂದರು.
ನಾವು ಪಂಜಾಬ್ ಮತ್ತು ಮತ್ತು ನೇಪಾಳ ಪ್ರವಾಸದಲ್ಲಿದ್ದ ಸಂದರ್ಭ ಅಲ್ಲೂ ಪುನೀತ್ ಅಭಿಮಾನಿಗಳು ಸಿಕ್ಕಿದ್ದರು. ಪುನೀತ್ ಸ್ಥಾನವನ್ನು ಯಾರೂ ತುಂಬಲಾಗದು ಎಂದು ಸ್ಮರಿಸಿದರು.
ಪುರಸಭಾ ಸದಸ್ಯ ಬನಶಂಕರಿ ರಘು ಮಾತನಾಡಿ ಪುನೀತ್ ಅವರ ವ್ಯಕ್ತಿತ್ವಕ್ಕೆ ನಮ್ಮ ಉದ್ಯಾನವನದ ಹಲವು ಗಿಡ ಮರಗಳೇ ಸಾಕ್ಷಿ ಎಂದರು. ಈ ಉದ್ಯಾನವನವನ್ನು ಕಳೆದ ವರ್ಷ ಡಾ. ರಾಜ್ ಪುತ್ರಿ ಲಕ್ಷ್ಮೀ ಅವರೇ ಉದ್ಘಾಟನೆ ಮಾಡಿದ್ದರು. ಪುನೀತ್ 50ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ನಮಗೆ ಸಂಭ್ರಮ ಎಂದರು. ಪುರಸಭಾ ಸದಸ್ಯರಾದ ಕವಿತಾ, ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ, ಪ್ರೇಮಮ್ಮ, ಗುರುಕುಲಾ ಸಂಘದ ರಾಮಣ್ಣ, ಡಾ.ರಾಜ್‌ಕುಮಾರ್ ಸಂಘದ ರೇವಣ್ಣ, ಮುಖಂಡರಾದ ದಿನೇಶ, ಮಹೇಶ , ರಂಗಸ್ವಾಮಿ, ತೇಜಸ್, ರಾಮಚಂದ್ರು, ಜಗದೀಶ್ ಕೆರೆಬೀದಿ ಇದ್ದರು.