ಜಿಲ್ಲೆ

ಜನರ ಅನುಕೂಲಕ್ಕಾಗಿ ಹೃದಯ ವೈಶಾಲ್ಯ: 35 ಪಿಎಚ್‌ಸಿ ಕೇಂದ್ರದಲ್ಲಿ ಅನುಷ್ಠಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಇತ್ತೀಚಿನ ದಿನದಲ್ಲಿ ಜನರಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕಾದರೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಮಹತ್ವಾಕಾಂಕ್ಷೆಯ ‘ಹೃದಯ ವೈಶಾಲ್ಯ ಯೋಜನೆ’ಗೆ ಗುರುವಾರ ಚಾಲನೆ ನೀಡಲಾಯಿತು.

ನಗರ, ಪಟ್ಟಣದಲ್ಲಿರುವ ಜನರಿಗೆ ತಪಾಸಣೆ ಮಾಡಿಸಿಕೊಳ್ಳಲು ಸಾಕಷ್ಟು ಅನುಕೂಲಗಳಿವೆ. ಆದರೆ ಗ್ರಾಮೀಣ ಭಾಗದಲ್ಲಿ ಈ ರೀತಿಯ ಸೌಲಭ್ಯವಿಲ್ಲ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಾಥಮಿಕ ತಪಾಸಣೆಗೆ ಅನುಕೂಲವಾಗುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‌ಸಿ)ದಲ್ಲಿಯೇ ಇಸಿಜಿ ಯಂತ್ರವನ್ನು ನೀಡಲಾಗಿದೆ. ಅಂತೆಯೇ ಈಗಾಗಲೇ ತಪಾಸಣೆ ಪ್ರಕ್ರಿಯೆಯೂ ಪ್ರಾರಂಭವಾಗಿದೆ.

ಏನಿದು ಹೃದಯ ವೈಶಾಲ್ಯ?: ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ತಪಾಸಣೆಯನ್ನು ಗ್ರಾಮೀಣರು ಸೂಕ್ತ ಸಮಯದಲ್ಲಿ ಮಾಡಿಸಿಕೊಳ್ಳುವುದಿಲ್ಲ. ಇದರಿಂದ ಅನಾಹುತವಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಹತ್ವದ ಯೋಜನೆ ರೂಪಿಸಿದರು. ಅದರಂತೆ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಪಂ ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅನುಷ್ಠಾನಗೊಳಿಸಿದ ಹೃದಯ ವೈಶಾಲ್ಯ ಯೋಜನೆಯನ್ನು ಮಂಡ್ಯದಲ್ಲಿಯೂ ಜಾರಿಗೊಳಿಸುವ ನಿರ್ಧಾರ ಮಾಡಿದರು. ಇದಕ್ಕೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸಹಕಾರವೂ ಸಿಕ್ಕಿತು.

ಯೋಜನೆಗೆ ಸಂಬಂಧಿಸಿದಂತೆ ಮಂಗಳೂರಿನ ಸಿಎಡಿ(ಕಾರ್ಡಿಯಾಲಜಿ ಅಟ್ ಡೂರ್‌ಸ್ಟೆಪ್ ಫೌಂಡೇಷನ್) ಸಂಸ್ಥೆ ಸಹಯೋಗ ಪಡೆಯಲಾಗಿದೆ. ಸಂಸ್ಥೆಯ ಸಿಎಸ್‌ಆರ್ ಅನುದಾನದಡಿ ಉಚಿತವಾಗಿ ಇಸಿಜಿ ಯಂತ್ರವನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ 120 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮೊದಲ ಹಂತದಲ್ಲಿ 35 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒದಗಿಸಲಾಗಿದೆ. ಅಂತೆಯೇ ಇದನ್ನು ನಿರ್ವಹಣೆ ಮಾಡಲು ಪಿಎಚ್‌ಸಿಗಳ ವೈದ್ಯರು ಸೇರಿದಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ತಪಾಸಣೆಯೂ ನಡೆಯುತ್ತಿದೆ.

ಆನ್‌ಲೈನ್‌ನಲ್ಲಿಯೇ ತಜ್ಞರಿಂದ ಸಲಹೆ: ಡಿಸಿ ಡಾ.ಕುಮಾರ ಅವರ ಮನವಿ ಮೇರೆಗೆ ಸಿಎಡಿ ಸಂಸ್ಥೆ 35 ಪಿಎಚ್‌ಸಿಗೆ ಯಂತ್ರ ನೀಡಿದೆ. ಪ್ರತಿಯೊಂದಕ್ಕೆ ಸುಮಾರು 35 ಸಾವಿರ ರೂ ಇದೆ. ಮಾತ್ರವಲ್ಲದೆ ಇದಕ್ಕೆ ಬೇಕಾದ ಅಗತ್ಯ ಪರಿಕರ ಸೇರಿದಂತೆ ನಿರ್ವಹಣೆಯನ್ನು ಸಂಸ್ಥೆ ಮಾಡಲಿದೆ. ಜತೆಗೆ ಸಂಸ್ಥೆಯಡಿ ಹೃದಯ ತಜ್ಞ ವೈದ್ಯರು ಕೆಲಸ ಮಾಡುತ್ತಿದ್ದು, ಪಿಎಚ್‌ಸಿಗಳಲ್ಲಿ ಜನರು ತಪಾಸಣೆಗೊಳಪಟ್ಟ ಬಳಿಕ ಅಲ್ಲಿ ಸಿಗುವ ವರದಿಯನ್ನು ಆನ್‌ಲೈನ್ ಮೂಲಕ ಅವರಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ಆಸ್ಪತ್ರೆಗೆ ಸೇರುವ ಅಥವಾ ಸಲಹೆಗಳಿದ್ದರೆ ಆನ್‌ಲೈನ್‌ಲ್ಲಿಯೇ ನೀಡುತ್ತಾರೆ. ಸಾರ್ವಜನಿಕರು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಾಗ ಪಿಎಚ್‌ಸಿಗೆ ತೆರಳಿ ಉಚಿತವಾಗಿ ತಪಾಸಣೆಗೊಳಪಡಬಹುದು.

ಯಾವ್ಯಾವ ಪಿಎಚ್‌ಸಿಗಳಲ್ಲಿ ಸೌಲಭ್ಯ?

ಮಂಡ್ಯ ವಿಧಾನಸಭಾ ಕ್ಷೇತ್ರ: ಶಿವಪುರ, ಹಲ್ಲೇಗೆರೆ, ಕೆರಗೋಡು, ಬೇಬಿ ಹಾಗೂ ಮಾರಗೌಡನಹಳ್ಳಿ

ಮದ್ದೂರು ಕ್ಷೇತ್ರ: ಕೆ.ಹೊನ್ನಲಗೆರೆ, ಕದಲೂರು, ಕೆಸ್ತೂರು, ಕೌಡ್ಲೆ ಹಾಗೂ ಕಾಡುಕೊತ್ತನಹಳ್ಳಿ

ಮಳವಳ್ಳಿ ಕ್ಷೇತ್ರ: ಬೆಳಕವಾಡಿ, ಚಿಕ್ಕಬಾಗಿಲು, ಡಿ.ಹಲಸಹಳ್ಳಿ, ಹಲಗೂರು ಹಾಗೂ ಅಂತರಹಳ್ಳಿ

ಶ್ರೀರಂಗಪಟ್ಟಣ ಕ್ಷೇತ್ರ: ಬೆಳಗೊಳ, ಮಹದೇವಪುರ, ತಗ್ಗಹಳ್ಳಿ, ಅರಕೆರೆ, ಕೊತ್ತತ್ತಿ

ಕೆ.ಆರ್.ಪೇಟೆ ಕ್ಷೇತ್ರ: ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು, ಶೀಳನೆರೆ, ಸಿಂಧಘಟ್ಟ, ಸಾರಂಗಿ

ಮೇಲುಕೋಟೆ ಕ್ಷೇತ್ರ: ಚಿಕ್ಕಬ್ಯಾಡರಹಳ್ಳಿ, ನಾರಾಯಣಪುರ, ಕ್ಯಾತನಹಳ್ಳಿ, ಕೆರೆತೂಣ್ಣೂರು, ಬೆಳ್ಳಾಳೆ

ನಾಗಮಂಗಲ ಕ್ಷೇತ್ರ: ಬಿಳಿಗುಂದ, ಕದಬಹಳ್ಳಿ, ಕಲಗೆರೆ, ದೇವಲಾಪುರ, ಚೀಣ್ಯ