ಬೆಳಗಾವಿ:ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಬಾಳೆ, ದ್ರಾಕ್ಷಿ, ದಾಳಿಂಬೆ, ಮಾವು, ಅಂಜೂರ, ಡ್ರಾಗನ್ ಹಣ್ಣು, ಗೇರು, ಸ್ಟ್ರಾಬೇರಿ, ಜಾಮುನು, ಪೇರಲ, ಬೆಣ್ಣೆ ಹಣ್ಣು, ಹೈಬ್ರಿಡ್ ತರಕಾರಿ ಹಾಗೂ ವಿವಿಧ ಹೂವು ಬೆಳೆಗಳ ಮೇಲೆ ಸಹಾಯಧನವನ್ನು ನೀಡಲು ಅರ್ಜಿ ಆಹ್ವಾನಿಸಿದೆ.
ಬೆಳೆಗಳ ಅನುಗುಣವಾಗಿ 10 ಸಾವಿರ ರೂ.ದಿಂದ 30 ಸಾವಿರ ರೂ. ವರೆಗೆ ಪ್ರತಿ ಹೆಕ್ಟೇರ್ ಸಹಾಯಧನವನ್ನು ಹಾಗೂ ನೀರಾವರಿ ವ್ಯವಸ್ಥೆಗಾಗಿ ಸಮುದಾಯ ಕೃಷಿ ಹೊಂಡಕ್ಕೆ 4.00 ರಿಂದ 5.32 ಲಕ್ಷ ರೂ. ವರೆಗೆ ಹಾಗೂ ವೈಯಕ್ತಿಕ ಕೃಷಿಹೊಂಡಕ್ಕೆ 75 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುವುದು.
ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿಕೊಂಡು ಪಾಲಿಮನೆ ನಿರ್ಮಿಸಲು ಪ್ರತಿ 10 ಗುಂಟೆಗೆ 4.70 ಲಕ್ಷ ರೂ.ಹಾಗೂ ಪ್ಲಾಸ್ಟಿಕ್ ಹೊದಿಕೆಗಾಗಿ 16,000 ರೂ. ಪ್ರತಿ ಹೆಕ್ಟೇರ್‌ರಂತೆ ಸಹಾಯಧನವನ್ನು ನೀಡಲಾಗುವುದು. ಅಷ್ಟೇ ಅಲ್ಲದೆ ಕೋಯ್ಲತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್ ನಿರ್ಮಿಸಿಕೊಳ್ಳಲು ಗರಿಷ್ಠ 2 ಲಕ್ಷ ರೂ., ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಿಸಲು ಗರಿಷ್ಠ 10 ಲಕ್ಷ ರೂ., ಹಣ್ಣು ಮಾಗಿಸುವ ಘಟಕಕ್ಕೆ ಪ್ರತಿ ಟನ್‌ಗೆ 35,000 ರೂ.ರಂತೆ ಗರಿಷ್ಠ 300 ಟನ್ ಸಾಮರ್ಥ್ಯದ ವರೆಗೆ ಪ್ರತಿ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ತರಕಾರಿ ಮತ್ತು ಹಣ್ಣು ಮಾರಾಟ ಮಾಡಲು ತಳ್ಳುವ ಗಾಡಿಗೆ 15,000 ರೂ. ಸಹಾಯಧನವನ್ನು ಮಾರ್ಗಸೂಚಿಯನ್ವಯ ವೆಚ್ಚವನ್ನು ಪರಿಗಣಿಸಿ ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಗೆ ಬೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಲು ಬೆಳಗಾವಿ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕ ಮಹಾಂತೇಶ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.