ಮಂಡ್ಯ: ತಮಿಳಿನಿಂದ ಹುಟ್ಟಿದ್ದು ಕನ್ನಡ ಎಂಬ ಬಹುಭಾಷ ನಟ ಕಮಲ್ ಹಾಸನ್ ಹೇಳಿಕೆ ಸಪ್ತ ಕೋಟಿಗೂ ಹೆಚ್ಚು ಕನ್ನಡಿಗರ ಸ್ವಾಭಿಮಾನ ಕೆರಳಿಸಿದೆ. ಪ್ರಚಾರದ ತೆವಲಿಗೆ ಇಂತಹ ತುಚ್ಚ, ಕುಚೋದ್ಯ ಹೇಳಿಕೆ ಸರಿಯಲ್ಲ ಎಂದು ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಟೀಕಿಸಿದ್ದಾರೆ.
ಕಮಲ್ಹಾಸನ್ ಕನ್ನಡ ಭಾಷೆಯ ಸಂಸ್ಕೃತಿ ಹಾಗೂ ಪರಂಪರೆ ಬಗ್ಗೆ ಮೊದಲು ಅಧ್ಯಯನ ಮಾಡಲಿ. ಕನ್ನಡ ಭಾಷಾ ಇತಿಹಾಸ ಅರಿಯುವುದು ಯಾರೋ ನಿರ್ದೇಶಕರು, ಕಥೆಗಾರರು ಬರೆದುಕೊಟ್ಟ ಕಥೆಯನ್ನು ನಟನೆ ಮಾಡುವಷ್ಟು ಸುಲಭವಲ್ಲ. ಇವರ ಈ ಬೇಜವಾಬ್ದಾರಿ ಹೇಳಿಕೆಯಿಂದ ಕನ್ನಡಿಗರ ಮತ್ತು ತಮಿಳರ ನಡುವೆ ಅನಗತ್ಯ ಭಾಷಾ ಸಂಘರ್ಷವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು ಕನ್ನಡಿಗರ ಕ್ಷಮೆ ಯಾಚಿಸಲಿ. ಕನ್ನಡದ ಮೇರು ನಟ ಶಿವರಾಜ್‌ಕುಮಾರ್ ಅವರು ಕಮಲ್ ಹಾಸನ್ ಹೇಳಿಕೆ ಖಂಡಿಸುವುದರ ಜತೆಗೆ ಹೇಳಿಕೆ ಹಿಂಪಡೆಯಲು ಒತ್ತಾಯಿಸಬೇಕು. ಒಂದು ವೇಳೆ ಕ್ಷಮೆಯಾಚನೆ ಮಾಡದಿದ್ದರೆ ಅವರ ನಟನೆಯ ಥಗ್‌ಲ್ೈ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬಾರದೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.