ಜಿಲ್ಲೆ

ಹೊಯ್ಸಳ ಕಾಲದ ಶಾಸನ ಪತ್ತೆ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಮಂಜಲನಗರ ಗ್ರಾಮದಲ್ಲಿ ಕಮ್ಮಸಂದ್ರ ಗ್ರಾಮಕ್ಕೆ ಹೋಗುವ ದಾರಿಯಲ್ಲಿನ ಮಾವಿನ ತೋಪಿನಲ್ಲಿರುವ ದೇವಾಲಯದಲ್ಲಿ ಶಾಸನ ಪತ್ತೆಯಾಗಿದ್ದು, 13ನೇ ಶತಮಾನದಲ್ಲಿ ಹೊಯ್ಸಳ ಅರಸರ ಆಳ್ವಿಕೆಯಲ್ಲಿ ನಿಮಾರ್ಣವಾದದ್ದೆಂದು ಮಾಹಿತಿ ಲಭಿಸಿದೆ.

ಮಂಜಲನಗರದ ಜಯಕುಮಾರ್​ ಅವರ ಮನವಿ ಮೇರೆಗೆ ಇತಿಹಾಸಕಾರರು ಹಾಗೂ ಶಾಸನ ತಜ್ಞ ಪ್ರೊ.ಕೆ.ಆರ್​.ನರಸಿಂಹನ್​, ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್​ ನೇತೃತ್ವದಲ್ಲಿಗ್ರಾಮಕ್ಕೆ ಭೇಟಿ ನಿಡಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು ಪುರಾವೆಗಳ ಆಧಾರದಲ್ಲಿ ದೇವಾಲಯ 13ನೇ ಶತಮಾನ ಅಂದರೆ 1288 ಇಸವಿಯಲ್ಲಿ ಹೊಯ್ಸಳರ ಅರಸ ರಾಮನಾಥನ ಕಾಲಕ್ಕೆ ಸೇರಿದ್ದು ಎಂದು ಅಂದಾಜಿಸಲಾಗಿದೆ. ಅರಸ ರಾಮನಾಥನ ಬಲವೃದ್ಧಿಗೆ ಆತನ ಮಂತ್ರಿ, ಪ್ರಮುಖ ಅಧಿಕಾರಿಗಳು ವೆಟ್ಟಪಲ್ಲಿಗೆ ಸೇರಿದ ಜಮೀನುಗಳನ್ನು ಧರ್ಮವಾಗಿ ಬಿಟ್ಟಿದ್ದಾರೆ ಎಂದು ಶಾಸನ ತಜ್ಞರು ತಿಳಿಸಿದ್ದಾರೆ.

ಹೊಯ್ಸಳರ ಕಾಲದ ದೇವಾಲಯವಾದರೂ ಇದನ್ನು ಚೋಳರ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ. ಈ ದೇವಾಲಯದಲ್ಲಿ 45 ವರ್ಷಗಳಿಂದ ಪೂಜಾದಿ ಕಾರ್ಯಗಳು ನಡೆಯಿತಿದ್ದು, ದೇವಾಲಯ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಗರ್ಭಗುಡಿಯಲ್ಲಿದ್ದ ಲಕ್ಷಿ$್ಮ-ನಾರಾಯಣನ ವಿಗ್ರಹಗಳನ್ನು ಗ್ರಾಮದ ಕಟ್ಟಡವೊಂದರಲ್ಲಿ ಸಂರಕ್ಷಿಸಲಾಗಿದೆ. ಇದನ್ನು ಮುಜರಾಯಿ ಇಲಾಖೆ ದಾಖಲೆಗಳಲ್ಲಿ ಲಕ್ಷಿ$್ಮನಾರಾಯಣ ದೇವಸ್ಥಾನ ಎಂದು ನಮೂದಿಸಲಾಗಿದೆ ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

ಇದು ಲಕ್ಷಿ$್ಮ-ನಾರಾಯಣನ ವಿಗ್ರಹಗಳಲ್ಲ ಇವು ಚನ್ನಕೇಶವ- ಶ್ರೀದೇವಿ ಭೂದೇವಿ ಅಮ್ಮನವರ ವಿಗ್ರಹಗಳು ವಿಶೇಷವಾಗಿ ಚನ್ನಕೇಶವ ವಿಗ್ರಹ ತಿರುಮಲದ ವೇಂಕಟೇಶ್ವರನ ವಿಗ್ರಹವನ್ನು ಹೊಲುತ್ತದೆ ಆದರೆ ವೈಕುಂಠ ಹಸ್ತಕ್ಕೆ ಬದಲಾಗಿ ಇಲ್ಲಿ ಅಭಯ ಹಸ್ತ ಇದೆ. ಇಂತಹ ದೇವಾಲಯ ಹಾಗೂ ವಿಗ್ರಹಗಳು ಕುರುಡುಮಲೆ ಮತ್ತು ಮುಡಿಯುನೂರಿನಲ್ಲೂ ನೋಡಬಹುದಾಗಿದೆ ಎನ್ನುತ್ತಾರೆ ಇತಿಹಾಸಕಾರರು.

ಗ್ರಾಮಸ್ಥರಿಂದ ಇತ್ತೀಚೆಗೆ ದೇವಾಲಯ ದುರಸ್ತಿ ಮಾಡಲಾಗಿದ್ದು, ದೇವಾಲಯದ ಗರ್ಭಗೃಹ ಮತ್ತದರ ಮುಂದಿನ ಭಾಗವನ್ನು ದುರಸ್ತಿಗೊಳಿಸಿ ಉಳಿದ ಭಾಗವನ್ನು ಕೆಡವಿಹಾಕಲಾಗಿದೆ. ಗರ್ಭಗೃಹದಮೇಲಿನ ಶಿಖರವನ್ನು ನೂತನಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಮುಂದಿನ ಗರುಡಗಂಬದ ಜಗಲಿ ಬಂಡೆಯಮೇಲೆ ಎರಡುಸಾಲಿನ ತಮಿಳು ಶಾಹನವಿದ್ದು, ಇದೂ 13ನೇ ಶತಮಾನಕ್ಕೆ ಸೇರುತ್ತದೆ ಎಂದು ದಾಖಲಿಸಲಾಗಿದೆ.

ಮಂಜಲನಗರದ ಗ್ರಾಮಸ್ಥರಿಗೆ ಇಲ್ಲಿನ ಇತಿಹಾಸ, ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿರುತ್ತಾರೆ. ಯದರೂರು ಮಂಜುನಾಥ ದೀಕ್ಷಿತ್​, ಕೃಷ್ಣಗಿರಿ ಸಂಶೋಧಕ ಗೋವಿಂದರಾಜ್​ ಅವರು ಕಾರ್ಯಕ್ಕೆ ನೆರವಾಗಿದ್ದು ದೇವಾಲಯವನ್ನು ಸಂರಕ್ಷಿಸಿಕೊಡಬೇಕೆಂದು ಗ್ರಾಮಸ್ಥರು ಸರ್ಕಾರಕ್ಕೆ ವಿನಂತಿಸಿದ್ದಾರೆ.