ಜಿಲ್ಲೆ

ಹೊಯ್ಸಳ-ಚೀತಾಗೆ ಇನ್ನು ಹೊಸ ಕಮಾಂಡ್​; ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರುವಂತಿಲ್ಲ!

Webdesk - Ravikanth

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆ ನಡೆಯದಂತೆ, ಒಂದುವೇಳೆ ನಡೆದರೂ ತಕ್ಷಣ ಹಾಜರಾಗಿ ಸೂಕ್ತ ಕ್ರಮಕೈಗೊಳ್ಳಲು ನಿಯೋಜಿಸಲಾಗಿರುವ ಹೊಯ್ಸಳ-ಚೀತಾಗಳಿಗೆ ಸದ್ಯದಲ್ಲೇ ಹೊಸ ಕಮಾಂಡ್​ ಬರಲಿದೆ. ಅದಕ್ಕೆಂದೇ ಸಾಫ್ಟ್​ವೇರ್​ ಅಪ್​ಡೇಟ್ ಮಾಡಲಾಗುತ್ತಿದೆ.

ಸದ್ಯ ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದೆ. ಈ ನಡುವೆ ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ ಹಾಗೂ ಚೀತಾ ವಾಹನ ಸಿಬ್ಬಂದಿಗೆ ಚುರುಕು ಮುಟ್ಟಿಸಿ ಎಲ್ಲ ಪ್ರದೇಶಗಳಲ್ಲೂ ಕಣ್ಗಾವಲಿಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.

ನಗರದಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್‌ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್ ವ್ಯವಸ್ಥೆ ಸಂಬಂಧ ಇಷ್ಟು ವರ್ಷಗಳ ಕಾಲ ಆಯಾ ಪೊಲೀಸ್ ಠಾಣಾಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ನಿಂದಲೇ ನಿಗಾ ವಹಿಸಲಾಗುತ್ತದೆ. ಗಸ್ತಿನಲ್ಲಿರುವ ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಪ್ರತಿದಿನ ವರದಿ ನೀಡುವ ಸಾಫ್ಟ್​ವೇರ್​ ಅಪ್‌ಡೇಟ್ ಮಾಡಲಾಗುತ್ತಿದೆ. ಹೊಯ್ಸಳದಲ್ಲಿ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದ್ದು, ಭೌಗೋಳಿಕ ಪ್ರದೇಶಗಳ ಆಧಾರದ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೆ ಜಿಯೋ ಫೆನ್ಸಿಂಗ್ ಮಾಡಿ ಸಾಫ್ಟ್​​ವೇರ್​ನಲ್ಲಿ ಅಳವಡಿಸುವ ಕೆಲಸ ನಡೆಯುತ್ತಿದೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ.

10 ನಿಮಿಷಕ್ಕಿಂತ ಹೆಚ್ಚು ಒಂದೇ ಕಡೆ ಇರುವಂತಿಲ್ಲ: ಪೊಲೀಸರು ಗಸ್ತು ತಿರುಗದೆ ಒಂದೇ ಕಡೆ ಹೊಯ್ಸಳ ಇರುವುದು ಕಂಡುಬಂದರೆ ಜಿಪಿಎಸ್ ಸಿಸ್ಟಮ್​ನಲ್ಲಿ ಎಚ್ಚರಿಕೆ ಬರುವ ಅಲರ್ಟ್ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ. ತಮಗೆ ನೀಡಿರುವ ಏರಿಯಾಗಳಲ್ಲಿ ಸದಾಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ. ನೀಡಲಾಗಿರುವ ಬೀಟ್‌ನಲ್ಲಿ ಏನಾದರೂ ಅಪರಾಧ ಪ್ರಕರಣ ನಡೆದರೆ ಆಯಾ ಪೊಲೀಸರನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ.