ಜಿಲ್ಲೆ

ಖಾಸಗಿ ಶಾಲಾ ವಾಹನ ಎಷ್ಟು ಸೇಫ್?

ಎನ್.ವೆಂಕಟೇಶ್

ಎಫ್​ಸಿ, ಇನ್ಶೂರೆನ್ಸ್​ ನವೀಕರಿಸದೆ 1 ವರ್ಷದಿಂದ ಓಡಾಡುತ್ತಿರುವುದು ಬಹಿರಂಗ | ಚಿಂತಾಮಣಿಯಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರೊಂದಿಗೆ ಸಭೆ

ಚಿಂತಾಮಣಿ: ಪಾಲಕರೇ ಮಕ್ಕಳನ್ನು ಶಾಲಾ ವಾಹನದಲ್ಲಿ ಕಳುಹಿಸುವ ಮುನ್ನ ಎಚ್ಚರ, ಎಚ್ಚರ... ಖಾಸಗಿ ಶಾಲಾ, ಕಾಲೇಜಿನ ಬಸ್​ ಹತ್ತಿಸುವ ಮುನ್ನ ದಾಖಲಾತಿ ಪರಿಶೀಲಿಸಿ.

ಸೋಮವಾರ ನಗರಠಾಣೆಯಲ್ಲಿ ಕರೆದಿದ್ದ ಎಲ್ಲ ಖಾಸಗಿ ಶಾಲಾ, ಕಾಲೇಜು ಮಾಲೀಕರು, ಮುಖ್ಯಸ್ಥರ ಸಭೆಯಲ್ಲಿ ಇಂತಹದೊಂದು ಎಚ್ಚರಿಕೆ ಸಂದೇಶ ಪ್ರತಿಧ್ವನಿಸಿತು.

ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಅನುಪಲ್ಲಿ- ಬುರುಡುಗಂಟೆ ಮಧ್ಯೆ ಅ.23ರಂದು ನಗರದ ಖಾಸಗಿ ಶಾಲಾ ವಾಹನ, ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟು, 1 ಮಗು ತೀವ್ರವಾಗಿ ಗಾಯಗೊಂಡ ಘಟನೆ ಬೆನ್ನಲ್ಲೇ ವಾಹನ ಎಫ್​ಸಿ, ಇನ್ಶೂರೆನ್ಸ್​ ನವೀಕರಿಸದೆ 1 ವರ್ಷದಿಂದ ಓಡಾಡುತ್ತಿರುವುದು ಬಹಿರಂಗಗೊಂಡಿದೆ.

ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ನಗರದ ಬಹುತೇಕ ಖಾಸಗಿ ಶಾಲಾ&ಕಾಲೇಜು ವಾಹನಗಳಿಗೆ ಸರಿಯಾದ ದಾಖಲಾತಿ ಇಲ್ಲದಿರುವುದನ್ನು ಸಹಾಯಕ ಪ್ರಾದೇಶಿಕ ಅಧಿಕಾರಿಯೊಬ್ಬರು ಬಹಿರಂಗಗೊಳಿಸಿದರು.

ಎಆರ್​ಟಿಒ ಕಚೇರಿ ಬ್ರೇಕ್​ ಇನ್​ಸ್ಪೆಕ್ಟರ್​ ಪೂಜಾ ಮಾತನಾಡಿ, ಹಲವು ಮಂದಿ ಶಾಲಾ, ಕಾಲೇಜಿನವರು ಗೈರಾಗಿರುವ ಬಗ್ಗೆ ಪ್ರಸ್ತಾಪಿಸಿ, ವಾಹನ ದಾಖಲಾತಿಗಳ ಅವಧಿ ಮೀರಿದ್ದು, ನವೀಕರಿಸಲು ಈಗಾಗಲೇ ನೋಟಿಸ್​ ಜಾರಿ ಮಾಡಿರುವುದಾಗಿ ತಿಳಿಸಿದರು.

ಶಾಲಾ&ಕಾಲೇಜು ವಾಹನಗಳಿಗೆ ಪ್ರತ್ಯೇಕ ಟ್ಯಾಕ್ಸ್​ ಇದೆ. ಬಹುತೇಕ ಕಾಲೇಜಿನವರು ಶಾಲಾ ವಾಹನ ಎಂದು ಟ್ಯಾಕ್ಸ್​ ಪಾವತಿ ಮಾಡಿ ಕಾಲೇಜು ಮಕ್ಕಳನ್ನು ಕರೆದೊಯ್ಯತ್ತಿದ್ದಾರೆ. 68ಕ್ಕೂ ಹೆಚ್ಚು ಶಾಲಾ, ಕಾಲೇಜು ವಾಹನಗಳಲ್ಲಿ 58 ವಾಹನಗಳ ಎಫ್​ಸಿ ಅವಧಿ, ಹಲವು ವಾಹಗಳ ಇನ್ಶೂರೆನ್ಸ್​ ಅವಧಿ ಮುಗಿದಿದೆ, ನೋಟಿಸ್​ ನೀಡಿದರೂ ನವೀಕರಣ ಮಾಡಿಲ್ಲ. ಕಾನೂನು ಮೀರಿದ ವಾಹನ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇದೆ.***ಆದರೆ ವಾಹನಗಳು ಶಾಲಾ ಕಾಲೇಜುಗಳಿಂದ ಹೊರಗೆ ಬರಬೇಕು, ಶಾಲಾ ಕಾಲೇಜುಗಳು ಒಳಗಡೆ ಇದ್ದರೆ ಹಿರಿಯ ಅಧಿಕಾರಿಗಳ ಅಪ್ಪಣೆ ಪಡೆಯಬೇಕು. ಮುಟ್ಟುಗೋಲು ಹಾಕಿಕೊಳ್ಳಲು ನೋಟಿಸ್​ ನೀಡಿದರೂ ಯಾರೂ ಸ್ಪಂದಿಸಲ್ಲ ಎಂದರು.

ಮಕ್ಕಳ ಬಗ್ಗೆ ಕಾಳಜಿ ಇಲ್ಲವೇ?

ಶಾಲಾ, ಕಾಲೇಜು ವಾಹನಗಳಿಗೆ ಎಫ್​ಸಿ, ಇನ್ಶೂರೆನ್ಸ್​ ಇಲ್ಲದೆ ವಾಹನ ಚಲಾಯಿಸುವಂತಿಲ್ಲ. ಆದರೂ ನವೀಕರಣ ಮಾಡದೆ ವಾಹನ ಚಲಾಯಿಸುತ್ತಿರುವ ಶಾಲಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್​ಪಿ ಪಿ.ಮುರಳೀಧರ್​ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು. ಮಕ್ಕಳನ್ನು ಕುರಿಗಳಂತೆ ತುಂಬುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅದರ ಬದಲು ಒಂದು ಕಂಟೇನರ್​ ತಂದು ಅದರಲ್ಲಿ ತುಂಬಿಬಿಡಿ. ಜವಾಬ್ದಾರಿ ಇಲ್ಲದೆ ಶಾಲೆ ನಡೆಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಬಹುತೇಕರು ಕಾನೂನು ಮೀರಿ ವಾಹನ ಚಾಲಾಯಿಸುತ್ತಿದ್ದಾರೆ. ಶಾಲಾ, ಕಾಲೇಜು ಬಳಿ ವಿದ್ಯಾರ್ಥಿಗಳು ವಾಹನಗಳು ತರುವಂತಿಲ್ಲ, ಲೈಸೆನ್ಸ್​ ಇಲ್ಲದೆ ಬಹುತೇಕ ಮಂದಿ ವಿದ್ಯಾರ್ಥಿಗಳು ಡಬಲ್​, ತ್ರಿಬಲ್​ ಕೂರಿಸಿಕೊಂಡು ಹೆಲ್ಮೆಟ್​ ಇಲ್ಲದೆ ಚಲಾಯಿಸುತ್ತಾರೆ. ಶಾಲಾ ವಾಹನ ಸೇರಿ ಬಹುತೇಕ ಎಲ್ಲ ಚಾಲಕರು ಸಮವಸ್ತ್ರ ಧರಿಸಲ್ಲ. ಶಾಲೆ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾದ ನೀವೇ ತಪ್ಪು ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ನಗರಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ವಿಜಿಕುಮಾರ್​, ಪಿಎಸ್​ಐ ರಮೇಶ್​, ಎಲ್ಲ ಶಾಲಾ, ಕಾಲೇಜುಗಳು ವಾಹನಗಳ ಮಾಲೀಕರು, ಪ್ರಾಂಶುಪಾಲರು ಇದ್ದರು.