ಜಿಲ್ಲೆ

ಶಾಲಾ ವಾಹನಗಳು ಎಷ್ಟು ಸುರಕ್ಷಿತ?

ಗಂಗಾಧರ ಬಿ ವಿ

*ಆಟೋ, ವ್ಯಾನ್‌ಗಳಲ್ಲಿ ಮಕ್ಕಳ ಕಳಿಸುವ ಪಾಲಕರೇ ಎಚ್ಚರ!

* ಮಕ್ಕಳ ಜೀವಕ್ಕಿಲ್ಲ ಭದ್ರತೆ

*ಪರವಾನಗಿ, ವಿಮೆ ಇಲ್ಲದೆ ಸಂಚಾರ

ಗಂಗಾಧರ್ ಬೈರಾಪಟ್ಟಣ ರಾಮನಗರ

ಮಕ್ಕಳನ್ನು ಶಾಲೆಗಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಶಾಲಾ ವಾಹನಗಳು ಈಗ ಮಕ್ಕಳ ಪಾಲಿಗೆ ಮಾತ್ರವಲ್ಲ, ಇತರ ವಾಹನ ಸವಾರರ ಪಾಲಿಗೂ ಕಂಟಕವಾಗಿ ಪರಿಣಮಿಸಿವೆ.

ಕಳೆದ ಹಲವಾರು ವರ್ಷಗಳಿಂದಲೂ ಶಾಲಾ ವಾಹನಗಳ ಚಾಲಕರು ನಡೆಸುತ್ತಿರುವ ಅವಾಂತರಗಳು ಒಂದೆರೆಡಲ್ಲ. ಹಲವಾರು ಬಾರಿ ಮಕ್ಕಳ ಪಾಲಿಗೆ ಮೃತ್ಯು ರೂಪದಲ್ಲಿ ಬಂದೆರಗಿದ್ದರೆ,

ಮತ್ತೊಂದೆಡೆ ರಸ್ತೆಯಲ್ಲಿ ವಾಹನ ಸವಾರರಿಗೂ ಸಾವಿನ ಮನೆ ದಾರಿ ತೋರಿವೆ. ಇದಕ್ಕೆಲ್ಲ ನಿಯಮ ಮೀರಿ ವಾಹನ ಚಲಾವಣೆ ಮಾಡುತ್ತಿರುವುದೇ ಕಾರಣ ಎನ್ನುವುದು ಗೊತ್ತಿದ್ದರೂ ಯಾರೂ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಮುಂದೆ ಬರುತ್ತಿಲ್ಲ.

ಪರವಾನಗಿಯೇ ಇರಲಿಲ್ಲ?

ಕಳೆದ ಎರಡು ದಿನದ ಹಿಂದೆ ಮಾಗಡಿಯಲ್ಲಿ ಶಾಲಾ ಬಾಲಕನೊಬ್ಬ ಶಾಲಾ ವಾಹನದಿಂದ ಬಿದ್ದು ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಖಾಸಗಿ ಶಾಲಾ ವಾಹನ ಡಿಕ್ಕಿಯಾದ ಪರಿಣಾಮ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ದಾಖಲೆಗಳನ್ನು ಪರಿಶೀಲಿಸಿದಾಗ ಆ ವಾಹನಕ್ಕೆ ವಿಮಾ ಅವಧಿ ಮುಗಿದು 4 ವರ್ಷ ಕಳೆದಿರುವುದು, ಅಪಘಾತ ಎಸಗಿದ ಚಾಲಕನ ಬಳಿ `ಭಾರಿ ವಾಹನಗಳ ಚಾಲನೆ ಪರವಾನಗಿಯೇ ಇರಲಿಲ್ಲ ಎನ್ನುವ ಆಘಾತಕಾರಿ ಸಂಗತಿ ಬಹಿರಂಗಗೊAಡಿದೆ. ಮತ್ತೊಂದು ಪ್ರಕರಣದಲ್ಲಿ ರಾಮನಗರ ಅರ್ಚಕರಹಳ್ಳಿಯ ಬಳಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಖಾಸಗಿ ಶಾಲಾ ವಾಹನ ಡಿಕ್ಕಿಯೊಡೆದು ಯುವಕನೊಬ್ಬ ಮೃತಪಟ್ಟಿದ್ದ.

ಆಟೋಗಳಲ್ಲಿ ಕುರಿ ಮಂದೆ?

ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹೊತ್ತಿವೆಯಾದರೂ, ಹೆಚ್ಚಿನ ಬಸ್‌ಗಳಲ್ಲಿ ಮಕ್ಕಳನ್ನು ಕುರಿ ಮಂದೆಯAತೆ ತುಂಬಿ ಕರೆ ತರುವ ದೃಶ್ಯಗಳು ಸಾಮಾನ್ಯವಾಗಿವೆ.

ಮತ್ತೊಂದೆಡೆ ಕೆಲವು ಶಾಲೆಗಳು ಚಿಕ್ಕ ವಾಹನದಲ್ಲಿಯೇ ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬರುವುದು ಎಗ್ಗಿಲ್ಲದೆ ನಡೆದಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ಆಟೋಗಳಲ್ಲಿ ಮಕ್ಕಳನ್ನು ಇಕ್ಕಟ್ಟಿನಲ್ಲಿ ಕೂರಿಸಿ ಶಾಲೆಗಳಿಗೆ ಕರೆದು ಕೊಂಡು ಹೋಗಲಾಗುತ್ತದೆ. ಈ ವೇಳೆ ಒಂದು ಕಡೆಗೆ ಮಕ್ಕಳ ಸ್ಕೂಲ್ ಬ್ಯಾಗ್‌ಗಳು, ಮತ್ತೊಂದು ಕಡೆ ಊಟದ ಬ್ಯಾಗ್‌ಗಳನ್ನು ನೇತು ಹಾಕಲಾಗಿರುತ್ತದೆ. ಒಂದು ವೇಳೆ ಅಪಘಾತ ಸಂಭವಿಸಿದರೆ ದೊಡ್ಡಮಟ್ಟದ ಅನಾಹುತ ತಪ್ಪಿದ್ದಲ್ಲ.

ಪಾಲಕರೇ ಪ್ರಶ್ನಿಸಿ

ಮಕ್ಕಳನ್ನು ಯಾವ ರೀತಿ ಶಾಲೆಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಬಗ್ಗೆಯೂ ಪಾಲಕರು ಗಮನ ಹರಿಸಬೇಕಿದೆ. ಒಂದೆಡೆ ಸಂಬಂಧಪಟ್ಟ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ನಿಮ್ಮ ಮಕ್ಕಳ ಸುರಕ್ಷತೆಯೇ ನಿಮಗೆ ಮುಖ್ಯವಾಗಿರುವಾಗ, ಅವರನ್ನು ಬಸ್, ಆಟೋಗಳಲ್ಲಿ ಹೇಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬುದನ್ನು ಗಮನಿಸಿ, ಪ್ರಶ್ನಿಸುವ ಕೆಲಸ ಮಾಡಬೇಕಿದೆ.

ವಿಮೆಯೇ ಇರುವುದಿಲ್ಲ

ಸಾಮಾನ್ಯವಾಗಿ ಕೆಲ ವಾಹನಗಳಿಗೆ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಮತ್ತೆ ಕೆಲ ವಾಹನಗಳನ್ನು ಅಕ್ರಮವಾಗಿ ಓಡಿಸುತ್ತಿವೆ. ಇನ್ನು ಮತ್ತೆ ಕೆಲವು ಕಡೆಗಳಲ್ಲಿ ಬಸ್ ಚಾಲನೆ ಮಾಡುವ ಚಾಲಕರ ಬಳಿ ನಿಯಮದಂತೆ ಭಾರೀ ವಾಹನಗಳ ಚಾಲನಾ ಪರವಾನಗಿಯೇ ಇಲ್ಲ ಎನ್ನುವುದು ಆಶ್ಚರ್ಯಕರ. ಇನ್ನು ಕಾಲ ಕಾಲಕ್ಕೆ ವಿಮೆ ನವೀಕರಣವೂ ಸಹ ಖಾಸಗಿ ಶಾಲೆಗಳಿಗೆ ದೊಡ್ಡ ಸಮಸ್ಯೆಯಾಗಿದೆ.

ಕಳೆದ ಹಲವು ದಿನಗಳ ಹಿಂದೆ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿ, ಜಿಲ್ಲಾ ಕೇಂದ್ರ ಪ್ರತಿಷ್ಠಿತ ಶಾಲಾ ಮತ್ತು ಕಾಲೇಜಿನ ವಾಹನಗಳನ್ನು ಪರಿಶೀಲಿಸಿ, ನೋಟಿಸ್ ಸಹ ನೀಡಿದ್ದಾರೆ.

ಸರ್ಕಾರದ ನಿಯಮಗಳೇನು?

ಶಾಲಾ ವಾಹನಗಳ ನಡೆಸಲು ಮಕ್ಕಳ ಸುರಕ್ಷತೆಯ ದÊಷ್ಟಿಯಿಂದ ಸರ್ಕಾರ ಹಾಗೂ ಸಾರಿಗೆ ಇಲಾಖೆ ಒಂದಿಷ್ಟು ನಿಮಯಮಗಳನ್ನು ಜಾರಿಗೆ ತಂದಿದೆ. ಆ ಪ್ರಕಾರ ಪ್ಯಾನಿಕ್ ಬಟನ್ ಅಳವಡಿಕೆ ಮಾಡಿರಬೇಕು. ಶಾಲಾ ವಾಹನಕ್ಕೆ ಜಿಪಿಎಸ್ ಅಳವಡಿಸಿರಬೇಕು. ಶಾಲಾ ವಾಹನದಲ್ಲಿ ಕಡ್ಡಾಯವಾಗಿ ಒಬ್ಬ ಕೆಲಸದವರನ್ನು ನೇಮಕ ಮಾಡಬೇಕು. ಚಾಲಕ ಕಡ್ಡಾಯವಾಗಿ ಹೆವಿ ಬ್ಯಾಡ್ಜ್ ಹೊಂದಿರಬೇಕು. ಕಾಲ ಕಾಲಕ್ಕೆ ವಿಮೆ ನವೀಕರಣವಾಗಬೇಕು.

ಮಕ್ಕಳ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ನಾವು ತಪ್ಪದೇ ಪಾಲಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ನಮ್ಮ ಒಕ್ಕೂಟದಿಂದಲೂ ಅರಿವು ಮೂಡಿಸಲಾಗುವುದು. |ಬಾಲಗಂಗಾಧರ್ ಮೂರ್ತಿನಿಕಟಪೂರ್ವ ಕಾರ್ಯದರ್ಶಿ, ಅನುದಾನ ರಹಿತ ಶಾಲೆಗಳ ಒಕ್ಕೂಟ, ಬೆಂಗಳೂರು ದಕ್ಷಿಣ.==