ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯ "ಜ್ಞಾನ ಭಾರತಿ'ಯಲ್ಲಿ ವಿದ್ಯಾರ್ಥಿ ಕೇಂದ್ರಿತ ಅಭಿವೃದ್ಧಿಗೆ ಶೈಕ್ಷಣಿಕ ಭವನ ಹಾಗೂ ಸಂಶೋಧನಾ ಭವನ ನಿರ್ಮಿಸುವ ಯೋಜನೆ ರೂಪಿಸಿರುವ ವಿವಿ, ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ 282 ಮರಗಳನ್ನಷ್ಟೇ ಕಡಿಯುತ್ತಿದ್ದೇವೆ ಎಂದು ಮಾಹಿತಿ ನೀಡಿತ್ತು. ಆದರೆ, ಬಿಬಿಎಂಪಿ ಆಕ್ಷೇಪಣೆಗಳಿಗೆ ಆಹ್ವಾನಿಸಿದ ಪತ್ರದಲ್ಲಿ "419 ಮರಗಳನ್ನು ಕಡಿಯುವ ಬಗ್ಗೆ' ಎಂದಿದೆ. ವಾಸ್ತವವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿದೆ ಎಂದು ವಿವಿಯ ನಿವೃತ್ತ ಪ್ರಾಧ್ಯಾಪಕ ರೇಣುಕಾ ಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರು ವಿವಿಯ ಕುಲಪತಿ ಡಾ.ಎಸ್.ಎಂ.ಜಯಕರ ಅವರು ತಿಳಿಸಿದ ಪ್ರಕಾರ ಕಡಿಯಲು ಹೊರಟಿರುವುದು 169 ನೀಲಗಿರಿ ಮತ್ತು ಅಕೇಶಿಯಾ ಮರಗಳಾಗಿವೆ. ಉಳಿದಂತೆ 137 ಮರಗಳನ್ನು ಬರ್ ಜೋನ್ನಲ್ಲೂ ಉಳಿಸಲಾಗುತ್ತದೆ ಎಂದಿದ್ದರು. ಆದರೆ, ಇದು ಸತ್ಯಕ್ಕೆ ದೂರವಾಗಿದ್ದು, ಕಡಿಯಲು ಹೊರಟಿರುವ ಮರಗಳಲ್ಲಿ ಸಾಕಷ್ಟು ಸಾಂಪ್ರದಾಯ ಮರಗಳು ಅಡಕವಾಗಿದೆ. ಕಟ್ಟಡ ನಿರ್ಮಾಣದಿಂದ ಅವು ನಾಶವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಧಾನಿಯಲ್ಲಿ ಉಳಿದುಕೊಂಡಿರುವ ಹಸಿರು ವಾತಾವರಣವನ್ನು ಕಸಿಯುವ ಕೆಲಸಗಳು ನಿರಂತರವಾಗುತ್ತಿದ್ದು, ಕೆಲವು ತಿಂಗಳ ಹಿಂದೆ ಕಬ್ಬನ್ ಪಾರ್ಕ್ನಲ್ಲಿ 5 ಎಕರೆ ಜಮೀನಿನಲ್ಲಿ ಆರ್ಟ್ ಗ್ಯಾಲರಿ ಪ್ರಸ್ತಾಪ ಬಂದಿತ್ತು. ಇದೀಗ ಬೆಂಗಳೂರು ವಿಶ್ವವಿದ್ಯಾಲಯ "ಜ್ಞಾನ ಭಾರತಿ' ಕ್ಯಾಂಪಸ್ ಮೇಲೆಯೂ ದೃಷ್ಟಿ ಬಿದ್ದಿದೆ.
ಪರಿಸರ ಸಂರಕ್ಷಣೆಯ ಕುರಿತಾಗಿ ಜಾಗತಿಕಮಟ್ಟದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ವಿದ್ಯಾ ಸಂಸ್ಥೆಗಳ ನಿಟ್ಟಿನಲ್ಲಿ ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅರಣ್ಯ ಇಲಾಖೆಯಿಂದ ಕೊಡಮಾಡಲ್ಪಟ್ಟ ಜಾಗಗಳಿದ್ದಲ್ಲಿ ಅದನ್ನು ಜೈವವೈವಿದ್ಯ ಅರಣ್ಯವಾಗಿ ಬೆಳೆಸಿ ಎಂದು ಯುಜಿಸಿ ತಿಳಿಸಿದೆ. ಹೀಗಿರುವಾಗ ಅದೇ ಯುಜಿಸಿಯ ಕೋಟಿಗಟ್ಟಲೆ ಹಣವನ್ನು ಉಪಯೋಗಿಸಿ ಕಟ್ಟಡಗಳನ್ನು ಕಟ್ಟಿದರೆ, ಅವರ ಆದೇಶಕ್ಕೆ ಧಕ್ಕೆ ತಂದಂತಾಗುತ್ತದೆ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಮರಗಳನ್ನು ಉಳಿಸುವುದು ಅನಿವಾರ್ಯವಾಗಿದೆ. > ರೇಣುಕಾ ಪ್ರಸಾದ್, ನಿವೃತ್ತ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ