ಜಿಲ್ಲೆ

ಜನರಿಗೆ ಎಷ್ಟು ನಿವೇಶನ ಕೊಟ್ಟಿದ್ದೀರಿ?: ಬಿಜೆಪಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು

ಮೈಸೂರು: ಬಿಜೆಪಿ ಅಧಿಕಾರಾವಧಿಯಲ್ಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿದ್ದು, 12 ವರ್ಷ ಅಧಿಕಾರ ನಡೆಸಿರುವ ಬಿಜೆಪಿಯವರು ಜನರಿಗೆ ಎಷ್ಟು ನಿವೇಶನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನಿಸಿದರು.


ಸಿದ್ದರಾಮಯ್ಯ ಅವಧಿಯಲ್ಲಿ 5,500 ನಿವೇಶನ ಹಂಚಿಕೆ ಮಾಡಲಾಗಿದೆ. ಸಾರ್ವಜನಿಕರಿಗೆ ನೀವು ಕೊಟ್ಟಿರುವ ನಿವೇಶನಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.


ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧಿಸಿದ ತಡೆಯಾಜ್ಞೆ ತೆರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಾಧಿಕಾರದ ಸಭೆ ನಡೆಯಲಿದೆ ಎಂದು ತಿಳಿಸಿದರು.


ಜುಲೈ 1ರಂದು ಪ್ರಾಧಿಕಾರ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಅದೇ ತಿಂಗಳ 26ರಂದು ಚಾಮುಂಡಿಬೆಟ್ಟ ನಮ್ಮ ಖಾಸಗಿ ಆಸ್ತಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ಆದರೆ, ಈ ಹಿಂದಿನಿಂದಲೂ ರಾಜ್ಯ ಸರ್ಕಾರವೇ ಚಾಮುಂಡಿ ಬೆಟ್ಟ ನಿರ್ವಹಣೆ ಮಾಡುತ್ತಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿತ್ತು. ಇದು ಸಂಪೂರ್ಣವಾಗಿ ಅಧಿಕಾರಿಗಳೇ ನಿರ್ವಹಣೆ ಮಾಡುವ ಪ್ರಾಧಿಕಾರ. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ ಎಂದು ಹೇಳಿದರು.


ಸೆ. 3ರಂದು ಚಾಮುಂಡಿ ಬೆಟ್ಟದ ದಾಸೋಹ ಭವನದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರೂ ಆದ ಸಿಎಂ ನೇತೃತ್ವದಲ್ಲಿ ಮೊದಲ ಸಭೆ ಆಯೋಜನೆ ಮಾಡಲಾಗಿದೆ. ದೇವಸ್ಥಾನ, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಬೇಕು ಎಂದು ಕೋರಿದರು.
ಮೌನ ಏಕೆ:
ಸಿದ್ಧಾರ್ಥ ಟ್ರಸ್ಟ್ಗೆ ಕೆಐಎಡಿಬಿ ಜಮೀನು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ರಾಜ್ಯಪಾಲರು ಸರ್ಕಾರದ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲು ಪತ್ರ ಬರೆದಿದ್ದಾರೆ. ರಾಜ್ಯಪಾಲರು ಈ ವಿಚಾರವಾಗಿ ಇಷ್ಟೊಂದು ತುರ್ತಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಿಗೆ ಮೌನ ವಹಿಸಿದ್ದಾರೆ ಎಂದು ದೂರಿದರು.
ರಾಷ್ಟ್ರೋತ್ಥಾನ ಪರಿಷತ್‌ಗೆ ಹಲವೆಡೆ ಜಮೀನು:
ಛಲವಾದಿ ನಾರಾಯಣಸ್ವಾಮಿ ಮಾಡಿರುವ ಆರೋಪ ನಿರಾಧಾರ. ಸಿದ್ಧಾರ್ಥ ಟ್ರಸ್ಟ್ಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬಿಜೆಪಿ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಮೀನು ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿ ಜಮೀನು ನೀಡಲಾಗಿದೆ ಎಂದು ಪ್ರಶ್ನಿಸಿದರು.
ರಾಜಭವನ ಬಿಜೆಪಿ ಕಚೇರಿಯಂತಾಗಿದೆ:
ರಾಜ್ಯಪಾಲರು ಬಿಜೆಪಿ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆದರೆ, ರಾಜ್ಯಪಾಲರು ನನಗೆ ಯಾವುದೇ ಪತ್ರ ಬಂದಿಲ್ಲ ಎನ್ನುತ್ತಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಬೆಳಗ್ಗೆ ಪತ್ರ ಬರೆದರೆ ಸಂಜೆಯೇ ಕ್ರಮಕ್ಕೆ ಮುಂದಾಗಿದ್ದಾರೆ. ರಾಜಭವನ ಬಿಜೆಪಿ ಕಚೇರಿಯಂತಾಗಿದೆ ಎಂದು ಕಿಡಿಕಾರಿದರು.