ಜಿಲ್ಲೆ

ಬ್ರಿಜ್ ನಿರ್ಮಿಸಲು ಇನ್ನೆಷ್ಟು ಬಲಿ ಬೇಕು?

ರವಿ ಎಸ್. ಬಳೂಟಗಿ

ಮುಂಡರಗಿ: ನಾಗರಹಳ್ಳಿ ಮತ್ತು ಬೆಣ್ಣಿಹಳ್ಳಿ ಮಾರ್ಗ ಮಧ್ಯದ ಹಳ್ಳದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಖಂಡಿಸಿ ಹಾಗೂ ಹಳ್ಳಕ್ಕೆ ಶೀಘ್ರವೇ ಸೇತುವೆ ನಿರ್ಮಿಸಬೇಕು ಎಂದು ನಾಗರಹಳ್ಳಿ, ಬೆಣ್ಣಿಹಳ್ಳಿ ಮತ್ತಿತರ ಗ್ರಾಮಸ್ಥರು ಗುರುವಾರ ದಿಢೀರನೆ ಬೆಣ್ಣಿಹಳ್ಳಿ ಸಮೀಪದ ಅರಭಾವಿ- ಚಳ್ಳಕೇರಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸೇತುವೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಯಾರೊಬ್ಬರೂ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ಬೈಕ್ ಸವಾರನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ. ಈಗ ಮತ್ತೊಬ್ಬರು ಅದೇ ರೀತಿ ಸಾವಿಗೀಡಾಗಿದ್ದಾನೆ. ಅನೇಕ ಬೈಕ್, ಕಾರು ನೀರಲ್ಲಿ ಪಲ್ಟಿಯಾಗಿವೆ. ರೈತರು ಟ್ರಾೃಕ್ಟರ್‌ನಲ್ಲಿ ಫಸಲು ತುಂಬಿಕೊಂಡು ಹೋಗುವಾಗ ಬಿದ್ದು ಗಾಯಗೊಂಡಿದ್ದಾರೆ. ಜತೆಗೆ ಭಾರಿ ಹಾನಿ ಕೂಡ ಅನುಭವಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂತಹ ಘಟನೆ ನಡೆಯುತ್ತಿವೆ ಎಂದು ಗ್ರಾಮಸ್ಥರು ದೂರಿದರು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್., ಪಿಡಬ್ಲುೃಡಿ ಇಇ ವಿ.ಎನ್. ಪಾಟೀಲ, ಎಇಇ ಬಸವರಾಜ ಎಚ್, ಪಿಎಸ್‌ಐ ವಿ.ಜಿ. ಪವಾರ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಚರ್ಚಿಸಿದರು. ‘ಆದಷ್ಟು ಬೇಗ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು. ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು’ ಎಂದು ಎಸಿ ಗಂಗಪ್ಪ ಅವರು ಎಇಇ ಬಸವರಾಜಗೆ ಸೂಚಿಸಿದರು. ಪ್ರತಿಕ್ರಿಯಿಸಿದ ಎಇಇ ‘ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಸಿಗಬೇಕಿದೆ. 10 ದಿನಗಳಲ್ಲಿ ತಾತ್ಕಲಿಕವಾಗಿ ಹಳ್ಳಕ್ಕೆ ಪೈಪ್ ಅಳವಡಿಸಿ ಮೇಲೆ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.
ಸರ್ಕಾರದಿಂದ ಅನುಮೋದನೆ ಪಡೆದು ಶಾಶ್ವತವಾಗಿ ಸೇತುವೆ ನಿರ್ಮಿಸಲಾಗುತ್ತದೆ ಎಂದರು. ಸುಮಾರು 2 ಗಂಟೆ ಹೆದ್ದಾರಿ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಒಂಬತ್ತು ಕಿಮೀ ಅಂತರ:
ಹಳ್ಳದ ಮೂಲಕ ಹೋದರೆ ನಾಗರಹಳ್ಳಿಯಿಂದ ಬೆಣ್ಣಿಹಳ್ಳಿ ಭಾಗ ಕೇವಲ 2 ಕಿ.ಮೀ ದೂರವಾಗುತ್ತದೆ. ಇಲ್ಲದಿದ್ದರೆ ನಾಗರಹಳ್ಳಿಯಿಂದ ಮುಂಡರಗಿ ಪಟ್ಟಣದ ಮಾರ್ಗವಾಗಿ ಬೆಣ್ಣಿಹಳ್ಳಿ ಭಾಗಕ್ಕೆ ಅಥವಾ ಬೆಣ್ಣಿಹಳ್ಳಿಯಿಂದ ಪಟ್ಟಣದ ಮಾರ್ಗವಾಗ ನಾಗರಹಳ್ಳಿ ಭಾಗಕ್ಕೆ ಹೋಗಲು 9 ಕಿ.ಮೀ. ಸಂಚರಿಸಬೇಕಾಗುತ್ತದೆ. ಹೀಗಾಗಿ ಮಾರ್ಗದ ಅಂತರ ಹಾಗೂ ಸಮಯದ ಉಳಿತಾಯದ ಲೆಕ್ಕಾಚಾರ ಹಾಕಿ ಬಹುತೇಕರು ಹಳ್ಳದ ಮಾರ್ಗವಾಗಿಯೇ ಸಂಚರಿಸುತ್ತಾರೆ. ಮಳೆಗಾಲದಲ್ಲಿ ರಭಸದಿಂದ ನೀರು ಹರಿಯುವಾಗ ಇಂತಹ ಅನಾಹುತಗಳು ಸಂಭವಿಸುತ್ತವೆ. ಹಳ್ಳಕ್ಕೆ ಸೇತುವೆ ನಿರ್ಮಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.