ಜಿಲ್ಲೆ

ಎಂಟು ವರ್ಷ ಸಂಗ್ರಹಿಸಿದ ಜಿಎಸ್‌ಟಿ ಮೊತ್ತ ಎಷ್ಟು? ಶ್ವೇತಪತ್ರ ಹೊರಡಿಸಲು ಎಂಎಲ್‌ಸಿ ಐವನ್ ಆಗ್ರಹ

ಮಂಗಳೂರು: ಕೇಂದ್ರ ಸರ್ಕಾರ ಎಂಟು ವರ್ಷಗಳಲ್ಲಿ ವಸೂಲಿ ಮಾಡಿದ ಜಿಎಸ್‌ಟಿ ಮೊತ್ತ ಎಷ್ಟು, ಯಾವುದಕ್ಕೆಲ್ಲ ಖರ್ಚು ಮಾಡಲಾಗಿದೆ? ಈವರೆಗೆ ರಾಜ್ಯ ಸರ್ಕಾರ ಪಾವತಿ ಮಾಡಿದ ಜಿಎಸ್‌ಟಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ಲಾಲ್‌ಭಾಗ್‌ನ ಮನಪಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಕಡಿತಗೊಳಿಸಿರುವುದು ಜನತೆಗೆ ದೀಪಾವಳಿ ಗಿಫ್ಟ್ ಎಂದು ಕರಪತ್ರ ಮುದ್ರಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಅಂಚೆ ಮೂಲಕ ಎಲ್ಲರ ಮನೆಗಳಿಗೆ ಕಳುಹಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ದುಬಾರಿ ಸ್ಲಾೃಬ್‌ಗಳಲ್ಲಿ ಜಿಎಸ್‌ಟಿ ವಸೂಲಿ ಮಾಡುತ್ತಿದ್ದರೂ ಮಾತನಾಡದ ಬಿಜೆಪಿ ಶಾಸಕರು ಹಾಗೂ ಸಂಸದರು ಈಗ ಮಾತ್ರ ದೀಪಾವಳಿ ಗಿಫ್ಟ್ ಎನ್ನುತ್ತಿರುವುದು ನಾಚಿಕೆಗೇಡು ಎಂದವರು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ 11,495 ಕೋಟಿ ರೂ. ಜಿಎಸ್‌ಟಿ ಮೊತ್ತ ಪಾವತಿ ಬಾಕಿ ಇದ್ದು, ಇದರ ಬಗ್ಗೆ ಬಿಜೆಪಿ ಶಾಸಕರು, ಸಂಸದರು ಮಾತನಾಡುತ್ತಿಲ್ಲ. ಇಂತಹ ದೀಪಾವಳಿ ಗಿಫ್ಟ್ ಕರಪತ್ರಗಳಿಗೆ ಜನತೆ ಸ್ಪಂದನೆ ನೀಡುವುದಿಲ್ಲ. ಜಿಎಸ್‌ಟಿ ಕಡಿಮೆ ಮಾಡಿದ ಯಶಸ್ಸು ಬಿಜೆಪಿಗೆ ಅಲ್ಲ, ಕಾಂಗ್ರೆಸ್‌ಗೆ ಸಲ್ಲಬೇಕು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸತತ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಇಳಿಕೆ ಮಾಡಿದೆ. ಇದರಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ ಎಂದರು.

ಜಿಎಸ್‌ಟಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಇಲ್ಲಿನ ಸಂಸದರು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಸಿಎಂ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ದ.ಕ. ಜಿಲ್ಲೆಯ ರಸ್ತೆ ಹದಗೆಟ್ಟಿದ್ದು, ರೈಲ್ವೆ ಕಾಮಗಾರಿ ಹಳ್ಳ ಹಿಡಿದಿದೆ ಎಂದವರು ದೂರಿದರು.

ಮುಖಂಡರಾದ ಭಾಸ್ಕರ ರಾವ್, ನಾಗೇಂದ್ರ ಕುಮಾರ್ ಮೊದಲಾದವರಿದ್ದರು.