ಗಜೇಂದ್ರಗಡ: ಬೃಹತ್ ಆಕಾರ, ಗಾತ್ರ ಹಾಗೂ ಹತ್ತಾರು ವಿಶೇಷಗಳಿಂದ ವಿಶ್ವದ ಗಮನ ಸೆಳೆದಿದ್ದ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಶತಮಾನದ ದೊಡ್ಡಹುಣಸೆ ಮರ ಧರೆಗುರುಳಿದ್ದು ಪರಿಸರ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಆದರೆ, ಸಂತಸದ ಸಂಗತಿ ಎಂದರೆ ಅದೇ ವೃಕ್ಷದ ಸಂತಾನ ತಾಲೂಕಿನ ನೆಲ್ಲೂರಿನ ಪ್ರಾದೇಶಿಕ ಅರಣ್ಯ ವಲಯದಲ್ಲಿ ಸಮೃದ್ಧವಾಗಿ ಬೆಳೆಯುತ್ತಿದೆ.
1985ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಪಿ.ಎಲ್. ಬೂದಿಹಾಳ ಅವರು ಸವಣೂರಿಗೆ ಹೋಗಿದ್ದರು. ಅಲ್ಲಿ ದೊಡ್ಡಹುಣಸೆ ಮರದ ಬೀಜದಿಂದ ಸಸಿಗಳನ್ನು ಬೆಳೆಸಿರುವುದನ್ನು ಕಂಡು ಎರಡು ಸಸಿಗಳನ್ನು ತಂದು ನೆಲ್ಲೂರಿನಲ್ಲಿ ನೆಟ್ಟಿದ್ದರು. ಆ ಮರಗಳು ಈಗ ಹೆಮ್ಮರವಾಗಿವೆ. ಒಂದು ಗಿಡ 4.80 ಮೀಟರ್ ಸುತ್ತಳತೆ ಹಾಗೂ 10 ಮೀಟರ್ ಎತ್ತರವಾಗಿದೆ. ಮತ್ತೊಂದು 1.70. ಮೀಟರ್ ಸುತ್ತಳತೆ, 7 ಮೀಟರ್ ಎತ್ತರ ಬೆಳೆದಿದೆ.
ಈ ಹುಣಸೆ ಮರ ದಕ್ಷಿಣ ಆಫ್ರಿಕಾ ಮೂಲದ ಬಾಂಬುಕೇಶಯಾ ಎನ್ನುವ ಪ್ರಭೇದಕ್ಕೆ ಸೇರಿದೆ. ಮರದ ಕಾಂಡದ ತಳವು ಉಬ್ಬಿದ ಬಾಟಲಿಯಂತಿದ್ದು, ಮೇಲ್ಭಾಗಕ್ಕೆ ಸಾಗಿದಂತೆ ಮೊನಚಾಗುತ್ತಾ ಸಾಗುತ್ತದೆ. ಈ ಪ್ರಭೇದದ ಮರಗಳು ಭಾರತದಲ್ಲಿ ಕೆಲವೇ ಕೆಲವು ಇವೆ. ಈ ಪೈಕಿ ಎರಡು ಮರಗಳು ಗದಗ ಜಿಲ್ಲೆಯಲ್ಲಿರವುದು ಹೆಮ್ಮೆಯ ಸಂಗತಿ.
ದೊಡ್ಡಹುಣಸೆ, ಆನೆಹುಣಸೆ, ಮುಗಿಮಾವು ಮತ್ತು ಬ್ರಹ್ಮಾಮ್ಲಿಕ್ ವೃಕ್ಷಗಳೆಂಬ ವೈವಿಧ್ಯಮಯ ಹೆಸರುಗಳಿಂದ ಈ ವೃಕ್ಷಗಳನ್ನು ಕರೆಯಲಾಗುತ್ತದೆ. ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು ಆಡೆನ್ಸೋನಿಯಾ ಡಿಜಿಟಾಟಾ. ಈ ಮರಗಳು ಬೂರುಗದ ಹತ್ತಿಯ ಕುಟುಂಬಕ್ಕೆ ಸೇರಿರುವುದರಿಂದ ಇವುಗಳನ್ನು ಆಂಗ್ಲ ಭಾಷೆಯಲ್ಲಿ ಬೊಬಾಟ್ ಟ್ರೀ, ಮಂಕಿ ಬ್ರೆಡ್ ಟ್ರೀ, ಆಫ್ರಿಕನ್ ಕಲಬಾಷ್ ಟ್ರೀ, ಸೋರ್ ಗೋಡರ ಟ್ರೀ ಎಂಬ ವಿಭಿನ್ನ ಹೆಸರುಗಳಿಂದಲೂ ಕರೆಯುತ್ತಾರೆ.
6000 ವರ್ಷ ಆಯಸ್ಸು: ಈ ಮರಗಳು ಆಫ್ರಿಕಾಖಂಡಕ್ಕೆ ಸೇರಿರುವುದರಿಂದ ಫ್ರೆಂಚ್ ಸಸ್ಯ ವಿಜ್ಞಾನಿ ಅಡೆನ್ಸನ್ ಸ್ಮರಣಾರ್ಥವಾಗಿ ಈ ಮರಗಳಿಗೆ ಅಡೆನ್ಸೋನಿಯಾ ಎಂಬ ಹೆಸರಿಡಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಾಲಿಗೆ ಈ ಮರಗಳು ಸೇರಿದ್ದು, ಇವುಗಳು ಸುಮಾರು 6000 ವರ್ಷಗಳವರೆಗೂ ಬದುಕಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಈ ಮರಗಳ ಜೀವಿತಾವಧಿ ಸಾವಿರಾರು ವರ್ಷಗಳಿದ್ದು. ಇದು ಕಾಯಿ ಬಿಡಲು ಒಂದು ಶತಮಾನವಾದರೂ ಬೇಕು. ಸಂಜೆ ಹೊತ್ತು ಹೂವಿನ ಮೊಗ್ಗುಗಳು ಕತ್ತಲೆಯಲ್ಲಿಯೇ ಅರಳುತ್ತವೆ. ಇದಕ್ಕೆ ಬೆಳಕಿನ ವ್ಯವಸ್ಥೆ ಮಾಡುವುದು ಅನಾವಶ್ಯ. ಇವುಗಳ ಹೂವು ಸಂಜೆ 6 ಗಂಟೆಗೆ ಅರಳವುದನ್ನು ಪ್ರಾರಂಭಿಸಿ ರಾತ್ರಿ 9 ಗಂಟೆಗೆ ಸಂಪೂರ್ಣವಾಗಿ ಅರಳುತ್ತವೆ. ಕೃತಕವಾಗಿ ಪರಾಗಸ್ಪರ್ಶ ಮಾಡಿದರೆ ಕಾಯಿ ಬಿಡುವ ಸಂಭವವಿದೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ದೊಡ್ಡ ಹುಣಸೆ ಮರ ಮಳೆಗೆ ಬಿದ್ದಿದ್ದು ಅದನ್ನು ಪುನರ್ ಸ್ಥಾಪಿಸಲಾಗಿದೆ. ಆದರೆ, ಅದು ಬಹಳ ವರ್ಷಗಳಾಗಿದ್ದು ಪುನಃ ಜೀವಂತವಾಗಿರುವುದು ಕಷ್ಟಸಾಧ್ಯ.-ಡಾ. ಕೆ. ಕೊಟ್ರೇಶ, ಪ್ರಾಧ್ಯಾಪಕರು, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡ