ಬೆಂಗಳೂರು: ಆಡಳಿತ ವಿಭಾಗದ ಐಜಿಪಿ ಸೀಮಂತ್ಕುಮಾರ್ ಸಿಂಗ್ ಮೊಬೈಲ್ ನಂಬರ್ ವೈರಲ್ ಆಗಿದ್ದು, ಹೆಲ್ಪ್ಲೈನ್ ನಂಬರ್ ಎಂದುಕೊಂಡು ಇದುವರೆಗೆ 2 ಸಾವಿರಕ್ಕೂ ಅಧಿಕ ಕಾರ್ವಿುಕರು ಕರೆ ಮಾಡಿ ಸಹಾಯಪಡೆದಿದ್ದಾರೆ.
ಸೀಮಂತ್ಕುಮಾರ್ ಲಾಕ್ಡೌನ್ ಸಂದರ್ಭದಲ್ಲಿ ನಗರದಲ್ಲಿದ್ದ ಕೆಲ ಕಾರ್ವಿುಕರಿಗೆ ಮೂಲಸೌಕರ್ಯ ಒದಗಿಸಿ ಸಹಾಯ ಮಾಡಿದ್ದರು. ಈ ಬಗ್ಗೆ ಬಿಹಾರ ಹಾಗೂ ಜಾರ್ಖಂಡ್ನಲ್ಲಿ ಸುದ್ದಿ ಬಿತ್ತರವಾಗಿತ್ತು. ಅದರಲ್ಲಿ ಇವರ ವೈಯಕ್ತಿಕ ಮೊಬೈಲ್ ನಂಬರ್ ಪ್ರಕಟಿಸಲಾಗಿತ್ತು. ಅದನ್ನು ಗಮನಿಸಿದ ಆ ರಾಜ್ಯಗಳ ಜನ, ಕಾರ್ವಿುಕರ ಹೆಲ್ಪ್ ಲೈನ್ ಸಂಖ್ಯೆ ಎಂದು ಭಾವಿಸಿದ್ದರು.
ಕೆಲಸ ಅರಸಿ ಬೆಂಗಳೂರಿಗೆ ಬಂದು ಲಾಕ್ಡೌನ್ನಿಂದ ಊರಿಗೆ ಹಿಂದಿರುಗಲಾಗದೆ, ಆಹಾರವೂ ಇಲ್ಲದೆ ಒದ್ದಾಡುತ್ತಿದ್ದ ಕಾರ್ವಿುಕರಿಗೆ ಬಿಹಾರದಲ್ಲಿರುವ ಸಂಬಂಧಿಕರು ಕರೆ ಮಾಡಿ ಸುದ್ದಿಯಲ್ಲಿ ಬಿತ್ತರವಾದ ಸೀಮಂತ್ಕುಮಾರ್ ನಂಬರ್ ನೀಡಿದ್ದರು. ಕಳೆದ 10 ದಿನಗಳಿಂದ ಸೀಮಂತ್ ಅವರ ಮೊಬೈಲ್ಗೆ 2 ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ಕಾರ್ವಿುಕರ ಕರೆಗೆ ಸ್ಪಂದಿಸಿದ ಐಜಿಪಿ, ಪೊಲೀಸ್ ಸಿಬ್ಬಂದಿ ಹಾಗೂ ಇತರರೊಂದಿಗೆ ಸೇರಿ 5 ಸಾವಿರಕ್ಕೂ ಅಧಿಕ ಜನರಿಗೆ ಆಹಾರ, ಆಶ್ರಯ ಒದಗಿಸಿದ್ದಾರೆ. ಸಹಾಯ ಪಡೆದ ಕಾರ್ವಿುಕರು ಇತರ ಕಾರ್ವಿುಕರೊಂದಿಗೆ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡ ಪರಿಣಾಮ ಸೀಮಂತ್ಕುಮಾರ್ ನಂಬರ್ ವೈರಲ್ ಆಗಿದ್ದು, ದಿನಕ್ಕೆ 400ಕ್ಕೂ ಅಧಿಕ ಕರೆಗಳು ಬರುತ್ತಿದೆ.
ಕರೆ ಮಾಡಿದವರಿಗೆ ಸಹಾಯ: ದಿನವೂ ನನ್ನ ಮೊಬೈಲ್ಗೆ ನೂರಾರು ಕರೆಗಳು ಬರುತ್ತಿವೆ. ಕರೆ ಮಾಡುವವರಲ್ಲಿ ಉತ್ತರ ಭಾರತದಿಂದ ಕೆಲಸ ಅರಸಿ ನಗರಕ್ಕೆ ಬಂದ ಕೂಲಿ ಕಾರ್ವಿುಕರು ಶೇ.90 ಇದ್ದಾರೆ. ಇದುವರೆಗೆ ಕರೆ ಮಾಡಿದವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಗೂ ಸಹಾಯ ಮಾಡಲು ಸೂಚಿಸಿದ್ದೇನೆಂದು ಸೀಮಂತ್ಕುಮಾರ್ ವಿಜಯವಾಣಿಗೆ ಪ್ರತಿಕ್ರಿಯಿಸಿದರು. ಹೊರ ರಾಜ್ಯದಿಂದ ಸಹಾಯ ಕೇಳಿದವರಿಗೆ ಅಲ್ಲಿ ಕೆಲಸ ಮಾಡುತ್ತಿರುವ ನನ್ನ ಬ್ಯಾಚ್ವೆುಟ್ಗಳು ಹಾಗೂ ಪರಿಚಿತರಿಗೆ ಮಾಹಿತಿ ನೀಡಿ ಇವರಿಗೆ ಸಹಾಯ ಮಾಡುವಂತೆ ಕೋರಿದ್ದೇನೆ. ಹಲವರು ತಮ್ಮನ್ನು ಊರಿಗೆ ಕಳಿಸಿ ಕೊಡುವಂತೆ ಕೇಳಿಕೊಂಡಿದ್ದು, ಸದ್ಯಕ್ಕೆ ಇದಕ್ಕೆ ಅವಕಾಶವಿಲ್ಲವೆಂದು ತಿಳಿಸಿದ್ದೇನೆ ಎಂದರು.
ಕಳೆದ 20 ವರ್ಷ ಗಳಿಂದ ಈ ನಂಬರ್ ಬಳಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಪರಿಚಿತರ ಬಳಿ ನಂಬರ್ ಇದೆ. ಇದರಿಂದ ನಂಬರ್ ಬದಲಿಸುವ ಯೋಚನೆ ಮಾಡಲಿಲ್ಲ. ಬದಲಾಗಿ ಬರುವ ಕರೆಗಳನ್ನು ಸ್ವೀಕರಿಸಿ ಅವರ ಕಷ್ಟಗಳಿಗೆ ಸಹಾಯ ಮಾಡುತ್ತಿದ್ದೇನೆ.
| ಸೀಮಂತ್ ಕುಮಾರ್ ಐಜಿಪಿ