ಬೆಂಗಳೂರು: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಗಳಿಗೆ ಯಾರಿಂದ, ಹೇಗೆ ಮೊಬೈಲ್ ಸಿಕ್ಕಿದೆ ಎಂಬುದನ್ನು ತಿಳಿಯಲೇಬೇಕಿದೆ. ಆದ್ದರಿಂದ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗುವುದು ಎಂದೇಳುವ ಮೂಲಕ ಹೈಕೋರ್ಟ್, ಕೇಂದ್ರ ಕಾರಾಗೃಹದಲ್ಲಿನ ಕರ್ಮಕಾಂಡ ಹೊರಗೆಳೆಯುವ ಸ್ಪಷ್ಟ ಸೂಚನೆ ನೀಡಿದೆ.
ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿಗಳಾದ ಶೇಕ್ ಮಹಮದ್ ಬಿಲಾಲ್ ಹಾಗೂ ಮಹಮದ್ ಶರೀಫ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಮೊಬೈಲ್ ಮೂಲಕ ಜಾಮೀನು ಅರ್ಜಿ ವಿಚಾರಣೆಯ ಕೋರ್ಟ್ ಕಲಾಪ ವೀಕ್ಷಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿರುವ ಹೈಕೋರ್ಟ್, ಈ ಕುರಿತು ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ.
ಬುಧವಾರ ಅರ್ಜಿ ವಿಚಾರಣೆ ಆರಂಭವಾದಾಗ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆರ್. ಸುಬ್ರಮಣಿ ಹಾಜರಾಗಿ, ಆರೋಪಿಗಳಿಗೆ ಮೊಬೈಲ್ ಸಿಕ್ಕ ಪ್ರಕರಣದ ಬಗ್ಗೆ ಬೆಂಗಳೂರು ದಕ್ಷಿಣ ವಲಯದ ಡಿಐಜಿ (ನಾನ್ ಐಪಿಎಸ್) ಟಿ.ಪಿ.ಶೇಷ ಅವರಿಂದ ತನಿಖೆ ನಡೆಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ಒಪ್ಪದ ಪೀಠ, ಇಂಥ ತನಿಖೆ ಬೇಡ. ಒಬ್ಬ ಪೊಲೀಸ್ ಅಧಿಕಾರಿ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ರಕ್ಷಣೆ ಮಾಡುತ್ತಾನೆ ಎನ್ನುವುದು ನಮಗೂ ತಿಳಿದಿದೆ. ಆದ್ದರಿಂದ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ಹೇಳಿತು.
ಸರ್ಕಾರದ ಪರ ವಕೀಲರು, ಪ್ರತ್ಯೇಕ ತಂಡ ರಚಿಸುವ ಅಗತ್ಯವಿಲ್ಲ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದರು. ಪ್ರತ್ಯೇಕ ತಂಡ ರಚನೆಗೆ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದ ಪೀಠ, ನಿವೃತ್ತ ಅಧಿಕಾರಿಗಳಿಗೆ ಯಾವ ವಸ್ತು ಹೇಗೆ ಜೈಲಿನ ಒಳಗೆ ಬರುತ್ತದೆ, ಯಾರನ್ನು ಹಿಡಿಯಬೇಕು, ಹೇಗೆ ಹಿಡಿಯಬೇಕು ಎನ್ನುವುದು ತಿಳಿದಿರುತ್ತದೆ. ಈ ಪ್ರಕರಣದಲ್ಲಿ ಆರೋಪಿಗಳು ಜೈಲಿನಲ್ಲಿ ಮೊಬೈಲ್ ಬಳಸಿರುವುದು ಆಕಸ್ಮಿಕವಾಗಿ ತಿಳಿದಿದೆ. ಇಲ್ಲವಾದರೆ ಯಾರಿಗೂ ಗೊತ್ತಾಗುತ್ತಲೇ ಇರಲಿಲ್ಲ ಎಂದು ಹೇಳಿತು.
ಪ್ರಕರಣದ ಕುರಿತು ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚನೆ ಮಾಡಲು ನ್ಯಾಯಾಲಯ ಉದ್ದೇಶಿಸಿದೆ. ಆದ್ದರಿಂದ, ತಂಡಕ್ಕೆ ನಿಯೋಜಿಸಬಹುದಾದ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಸರ್ಕಾರ ಗುರುವಾರ ಕೋರ್ಟ್ಗೆ ಸೂಚಿಸಬೇಕು. ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸುವ ಕುರಿತು ನ್ಯಾಯಾಲಯ ನಿರ್ಧರಿಸಲಿದೆ ಎಂದು ತಿಳಿಸಿ, ವಿಚಾರಣೆ ಮುಂದೂಡಿತು.