Prajwal Revanna : ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ತೋಟದ ಮನೆಯ ಅಟ್ಟದಲ್ಲಿ ಬಚ್ಚಿಟ್ಟಿದ್ದ ಸೀರೆ ಮಹತ್ವದ ಪಾತ್ರ ವಹಿಸಿದ್ದು, ಪ್ರಜ್ವಲ್ನನ್ನು ಶಿಕ್ಷೆಗೆ ಗುರಿಪಡಿಸಲು ಕಾರಣವಾದ ವಿಧಿವಿಜ್ಞಾನ ಸಾಕ್ಷ್ಯಗಳ ಪ್ರಮುಖ ಅಂಶಗಳಲ್ಲಿ ಸೀರೆ ಕೂಡ ಒಂದಾಗಿತ್ತು ಎಂದು ತಿಳಿದುಬಂದಿದೆ.
47 ವರ್ಷದ ಮನೆಕೆಲಸದವಳ ಮೇಲೆ ಅತ್ಯಾಚಾರ ಎಸಗಿದ ಮತ್ತು ಹಲ್ಲೆಯ ವಿಡಿಯೋವನ್ನು ರೆಕಾರ್ಡ್ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಗಸ್ಟ್ 1 ರಂದು ಪ್ರಜ್ವಲ್ ರೇವಣ್ಣನನ್ನು ದೋಷಿ ಎಂದು ತೀರ್ಪು ನೀಡಿದ ಜನಪ್ರತಿನಿಧಿಗಳು ವಿಶೇಷ ನ್ಯಾಯಾಲಯ, ಆಗಸ್ಟ್ 2ರಂದು ಜೀವಾವಧಿ ಶಿಕ್ಷೆ ಮತ್ತು 11 ಲಕ್ಷ ರೂ. ದಂಡ ವಿಧಿಸಿತು. ಈ ದಂಡದ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯ ಆದೇಶ ಮಾಡಿತು.
ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷ್ಯಗಳಲ್ಲಿ ಪ್ರಮುಖವಾದುದ್ದು ಯಾವುದೆಂದರೆ, ಸಂತ್ರಸ್ತೆಯ ಸೀರೆ. ತನಿಖಾಧಿಕಾರಿಗಳ ಪ್ರಕಾರ, ಅತ್ಯಾಚಾರದ ನಂತರ, ಪ್ರಜ್ವಲ್ ಸಂತ್ರಸ್ತೆಯ ಸೀರೆಯನ್ನು ಬಲವಂತವಾಗಿ ತೆಗೆದುಕೊಂಡಿದ್ದನು. ಅದರಲ್ಲಿ ಸಾಕಷ್ಟು ಭೌತಿಕ ಸಾಕ್ಷ್ಯಗಳಿದ್ದವು. ಇದೇ ಆತನಿಗೆ ಮುಳುವಾಗಿದೆ.
ಅಂದಹಾಗೆ, ಆ ಉಡುಪನ್ನು ನಾಶಮಾಡುವ ಬದಲು, ಪ್ರಜ್ವಲ್ ಅದನ್ನು ತನ್ನ ತೋಟದ ಮನೆಯ ಅಟ್ಟದಲ್ಲಿ ಬಚ್ಚಿಟ್ಟಿದ್ದನು ಎಂದು ಹೇಳಲಾಗಿದೆ. ಎಂದಿಗೂ, ಯಾರಿಗೂ ಪತ್ತೆಯಾಗುವುದಿಲ್ಲ ಎಂಬ ವಿಶ್ವಾಸದಿಂದ ಆತ ಸೀರಿಯನ್ನು ಅಲ್ಲಿ ಬಚ್ಚಿಟ್ಟಿದ್ದ. ಆದರೆ, ಆತನ ಈ ನಿರ್ಧಾರ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಗುವಂತೆ ಮಾಡಿತು.
ಲೈಂಗಿಕ ದೌರ್ಜನ್ಯ ನಡೆದ ಸಮಯದಲ್ಲಿ ಏನು ಧರಿಸಿದ್ದೆ ಎಂದು ತನಿಖೆಯ ಸಂದರ್ಭದಲ್ಲಿ ಅಧಿಕಾರಿಗಳು ಸಂತ್ರಸ್ತೆ ಬಳಿಕ ಪ್ರಶ್ನೆ ಮಾಡಿದಾಗ, ಪ್ರಜ್ವಲ್ ತನ್ನ ಸೀರೆಯನ್ನು ಎಂದಿಗೂ ಹಿಂತಿರುಗಿಸಲಿಲ್ಲ ಮತ್ತು ಅದು ಇನ್ನೂ ತೋಟದ ಮನೆಯಲ್ಲಿರಬಹುದು ಎಂದು ಆಕೆ ಬಹಿರಂಗಪಡಿಸಿದಳು. ಇದೇ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಪ್ರಜ್ವಲ್‌ಗೆ ಸಂಬಂಧಿಸಿದ ತೋಟದ ಮನೆಯ ಮೇಲೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದಾಗ ಆ ಸೀರೆ ಪತ್ತೆಯಾಗಿದೆ. ಅದನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದರಲ್ಲಿ ವೀರ್ಯದ ಕಲೆ ಇರುವಿಕೆಯನ್ನು ದೃಢಪಡಿಸಿತು. ಬಳಿಕ ಡಿಎನ್‌ಎ ವಿಶ್ಲೇಷಣೆ ನಡೆಸಿದಾಗ ಪ್ರಜ್ವಲ್‌ಗೆ ಹೊಂದಿಕೆಯಾಯಿತು.
ಈ ಪ್ರಕರಣವನ್ನು ಮತ್ತಷ್ಟು ಬಲಪಡಿಸುವಲ್ಲಿ ಸೀರೆ ಮತ್ತು ಸಂತ್ರಸ್ತೆಯ ವಿವರವಾದ ಹೇಳಿಕೆ ಪ್ರಮುಖ ಪಾತ್ರ ವಹಿಸಿವೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಸೀರೆಯ ಮೇಲಿನ ಡಿಎನ್‌ಎ ಪುರಾವೆಗಳು ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ಅತ್ಯಂತ ಮಹತ್ವದ ಅಂಶಗಳಲ್ಲಿ ಒಂದಾಗಿ ಹೊರಹೊಮ್ಮಿದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
'ಹಿಂದೂಸ್ಥಾನ್ ಟೈಮ್ಸ್' ವರದಿ ಪ್ರಕಾರ, ಜನಪ್ರತಿನಿಧಿಗಳ ವಿಶೇಷ ಕೋರ್ಟ್ನ ವಿಚಾರಣೆಯಲ್ಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರು ಸ್ವಯಂಪ್ರೇರಿತವಾಗಿ ಮುಂದೆ ಬಂದು ದೂರು ದಾಖಲಿಸಿಲ್ಲ. ಕಳೆದ ವರ್ಷ ಲೋಕಸಭಾ ಚುನಾವಣೆಗೆ ಇನ್ನು ಆರು ದಿನಗಳು ಬಾಕಿ ಇರುವಾಗ ಈ ರೀತಿ ಮಾಡಲಾಯಿತು. ಬಲವಂತವಾಗಿ ನನ್ನ ವಿರುದ್ಧ ದೂರು ಕೊಡಿಸಲಾಗಿದೆ. ರಾಜಕೀಯದಲ್ಲಿ ವೇಗವಾಗಿ ಬೆಳೆದಿದ್ದೇ ಇಂದು ನನಗೆ ಮುಳ್ಳಾಯಿತು. ನಾನು ಮೆರಿಟ್ ವಿದ್ಯಾರ್ಥಿ. ಬಿಇ ಮೆಕ್ಯಾನಿಕಲ್ ಪದವಿಧರ. ಕಳೆದ ಆರು ತಿಂಗಳಿನಿಂದ ನಮ್ಮ ತಂದೆ-ತಾಯಿಯ ಮುಖ ನೋಡಿಲ್ಲ. ಶಿಕ್ಷೆ ಪ್ರಕಟಿಸುವ ಮುನ್ನ ನನ್ನ ಪೋಷಕರನ್ನು ಪರಿಗಣಿಸಿ ಎಂದು ಪ್ರಜ್ವಲ್ ಅಳಲು ವ್ಯಕ್ತಪಡಿಸಿದ್ದ. ಇದೆಲ್ಲವನ್ನೂ ಆಲಿಸಿದ ಬಳಿಕವೇ ನ್ಯಾಯಾಲಯ, ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ಸ್ಪರ್ಧಿಸಿದ್ದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ತನ್ನ ಎದುರಾಳಿ ವಿರುದ್ಧ ಗೆಲುವು ಸಾಧಿಸಲು ಹಪಾಹಪಿಯಲ್ಲಿದ್ದ. ಮತ ಚಲಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ವ್ಯಾಪಕವಾಗಿ ಕೇಳಿಬಂದಿತು. ಇದಕ್ಕೆ ಪುಷ್ಠಿ ನೀಡುವಂತೆ, ಪ್ರಜ್ವಲ್ನನ್ನು ಒಳಗೊಂಡ ಸಾಕಷ್ಟು ಅಶ್ಲೀಲ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿತು. ಇದು ಸುದ್ದಿಯಾಗುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದು, ದೊಡ್ಡ ಅಚ್ಚರಿ ಹಾಗೂ ಅನುಮಾನಕ್ಕೆ ಕಾರಣವಾಯಿತು.
ಪ್ರಜ್ವಲ್ ರೇವಣ್ಣ ಒಳಗೊಂಡ ಹಲವಾರು ಅಶ್ಲೀಲ ವಿಡಿಯೋಗಳು ಆತನ ಪೆನ್ಡ್ರೈವ್ನಲ್ಲಿರುವುದು ಬೆಳಕಿಗೆ ಬಂದಿತ್ತು. ಇದನ್ನು ಸ್ವತಃ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಬಟಾಬಯಲು ಮಾಡಿದ್ದರು. ಈ ಕುರಿತಂತೆ ಒಂದಷ್ಟು ಮಾಧ್ಯಮಗಳಲ್ಲಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಚುನಾವಣೆ ಬಳಿಕ ವಿದೇಶದಲ್ಲಿ ಅಡಗಿದ್ದ ಪ್ರಜ್ವಲ್‌ಗೆ, ಬ್ಯಾಕ್ ಟು ಬ್ಯಾಕ್ ಲುಕ್ಔಟ್ ನೋಟಿಸ್ ಕಳುಹಿಸಲಾಗಿತ್ತು. ಇದರ ಬೆನ್ನಲ್ಲೇ ವಿದೇಶದಿಂದ ನೇರವಾಗಿ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆ ಆತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ, ಕಸ್ಟಡಿಗೆ ಒಳಪಡಿಸಿದರು. ಇನ್ನು ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ವಿರುದ್ಧ ಕಣಕ್ಕಿಳಿದಿದ್ದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಲೀಡ್ ಪಡೆದು, ಆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.
ಈ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳು ಸಮೀಪಿಸಿದರೂ ಪ್ರಜ್ವಲ್ ರೇವಣ್ಣ ಮಾತ್ರ ಇನ್ನೂ ವಿದೇಶದಿಂದ ಬೆಂಗಳೂರಿಗೆ ವಾಪಾಸ್ ಆಗಿರಲಿಲ್ಲ. ಈ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎಸ್ಐಟಿಗೆ, ಮಾಜಿ ಸಂಸದನ ಪ್ರಕರಣ ದೊಡ್ಡ ತಲೆನೋವಾಗಿ ಕಾಡಿತ್ತು. ಬಂಧನದ ವಾರೆಂಟ್ ಉಲ್ಲೇಖ ಮಾಡಿ, ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ರವಾನಿಸಿತ್ತು. ಇದರಲ್ಲಿ, ಈ ಕೂಡಲೇ ಪ್ರಜ್ವಲ್‌ಗೆ ಸಂಬಂಧಿಸಿದ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಬೇಕು ಎಂದು ಪತ್ರದ ಮುಖೇನ ಮನವಿ ಮಾಡಲಾಗಿತ್ತು.
ಪ್ರಜ್ವಲ್ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್ಗಳ ಪೈಕಿ, ಮೈಸೂರಿನ ಕೆ.ಆರ್. ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಕೇಸ್ ಬಲವಾಯಿತು. ಈ ಪ್ರಕರಣದ ಸಂತ್ರಸ್ತೆ ಗಟ್ಟಿಯಾಗಿ ನಿಂತಿದ್ದೇ ಅಪರಾಧಿಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಾಯಿತು. ಕೇವಲ ಇದೊಂದು ಕೇಸ್ನಲ್ಲಿ ಪ್ರಜ್ವಲ್‌ಗೆ ಕಠಿಣ ಶಿಕ್ಷೆ ವಿಧಿಸಿರುವ ಕೋರ್ಟ್, ಉಳಿದ ಮೂರು ಕೇಸ್ಗಳನ್ನು ಪರಿಶೀಲಿಸಿದರೆ, ಇನ್ಯಾವ ಶಿಕ್ಷೆಯನ್ನು ವಿಧಿಸಲಿದೆ ಎಂಬುದೇ ಹಲವರ ಕುತೂಹಲ.
ಸಂತ್ರಸ್ತ ಮಹಿಳೆ ಕೋರ್ಟ್ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಗಟ್ಟಿಯಾಗಿ ನಿಂತಿದ್ದೇ ಇಂದು ಆಕೆಗೆ ಜಯ ತಂದುಕೊಟ್ಟಿದೆ. ಮತ್ತು ಮಾಜಿ ಸಂಸದನನ್ನು ಜೀವನಪರ್ಯಂತ ಜೀವಾವಧಿ ಶಿಕ್ಷೆ ಅನುಭವಿಸುವಂತೆ ಮಾಡಿದೆ.