ಹೂವಿನಹಡಗಲಿ: ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಇಲಾಖೆ ಜಿಲ್ಲಾ ಅಧಿಕಾರಿ ಗುಡ್ಡಪ್ಪ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡೂ ವಸತಿ ನಿಲಯದಲ್ಲಿ ಅಡುಗೆ ಮನೆ, ವಿದ್ಯಾರ್ಥಿಗಳ ಕೊಠಡಿ ಹಾಗೂ ಶೌಚಗೃಹಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಇಲಾಖೆಯಿಂದ ಹಾಸ್ಟೆಲ್ ಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ನಿಲಯ ಪಾಲಕರು ತಿಳಿಸಬೇಕು. ಅಡುಗೆ ತಯಾರಕರು ಗುಣಮಟ್ಟದ ಆಹಾರ ತಯಾರಿಸಬೇಕು. ಸರ್ಕಾರ ಸಂಬಳ ಪಡೆಯುವ ನಾವು ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು. ವಸತಿ ನಿಲಯದ ಎಲ್ಲ ಸಮಸ್ಯೆಗಳಿಗೆ ವಾರ್ಡನ್‌ಗಳೇ ನೇರ ಹೊಣೆ ಎಂದು ಗುಡ್ಡಪ್ಪ ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ, ನಿಲಯದ ದಾರಿಯಲ್ಲಿ ವಿದ್ಯುತ್ ದೀಪ ಅಳವಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು. ಈ ಹಿಂದೆ ಮಾಡಿದ ಕಾಮಗಾರಿ ಗಳು ಅಪೂರ್ಣವಾಗಿರುವುದನ್ನು ಗಮನಿಸಿ ಕೆಆರ್‌ಐಡಿಎಲ್‌ನ ಎಇಇ ಆನಂದ ಅವರನ್ನು ಸ್ಥಳಕ್ಕೆ ಕರೆಸಿ ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ವಸತಿ ನಿಲಯದ ಸುತ್ತ ಸ್ವಚ್ಛತೆ ಕಾಪಾಡಬೇಕು. ದುರಸ್ತಿಗೆ ಬಂದ ಸಿಸಿ ಕ್ಯಾಮರಗಳನ್ನು ಸರಿಪಡಿಸಬೇಕು. 19.58 ಲಕ್ಷ ರೂ. ಮೌಲ್ಯದಲ್ಲಿ ಸಿಸಿ ರಸ್ತೆ ಹಾಗೂ ರಕ್ಷಣಾಗೋಡೆ ನಿರ್ಮಾಣ ಮಾಡುವ ಯೋಜನೆ ಪೂರ್ಣಗೊಂಡಿದೆ. ಆದರೆ ನಿಲಯದ ಮುಂಭಾಗದಲ್ಲಿ ಸಿಸಿ ರಸ್ತೆ ಹಾಗೂ ರಕ್ಷಣಾಗೋಡೆ ನಿರ್ಮಾಣವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ನಿಲಯ ಪಾಲಕರಿಗೆ ಅಧಿಕಾರಿ ಗುಡ್ಡಪ್ಪ ತಿಳಿಸಿದರು. ಇಲಾಖೆಯ ತಾಲೂಕು ಅಧಿಕಾರಿ ಜಯಪ್ರಕಾಶ್, ನಿಲಯಪಾಲಕ ಕೊಟ್ರೇಶ್, ನಿಲಯ ಪಾಲಕಿ ಮಂಜುಳಾ ಹಾಗೂ ಇತರರಿದ್ದರು.