ಹರಪನಹಳ್ಳಿ: ಹಲುವಾಗಲು ಹಾಗೂ ಮತ್ತೂರು ನಡುವೆ ಇರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಟಿ. ಅವರನ್ನು ಅಮಾನತುಗೊಳಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕಾಂತರಾಜು ಈ ಕುರಿತ ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಂತಿ-ಭೇದಿಯಿಂದ ಬಳಲುತ್ತಿದ್ದಾಗ ಅವರಿಗೆ ಔಷಧ ವ್ಯವಸ್ಥೆ ಕಲ್ಪಿಸುವಂತೆ ಕೋರಿದ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದರು. ವಿದ್ಯಾರ್ಥಿಗಳ ಚಿಕಿತ್ಸೆಗಾಗಿ ಪಾಲಕರಿಂದ ತಲಾ 50 ರೂ. ತರುವಂತೆ ತಿಳಿಸಬೇಕೆಂದು ಸಿಬ್ಬಂದಿಗೆ ಹೇಳಿದ್ದರು.
ಇದಕ್ಕೆ ಒಪ್ಪದ ಸಿಬ್ಬಂದಿಗೆ ಕೆಲಸ ಬಿಟ್ಟು ಹೋಗುವಂತೆ ವೈಯಕ್ತಿಕವಾಗಿ ನಿಂದಿಸಿದ್ದರು. ವಿದ್ಯಾರ್ಥಿಗಳನ್ನು ಕೊಠಡಿಗೆ ಕರೆಸಿ ಥಳಿಸಿದ್ದಾರೆ ಎಂದು ಹೇಳಲಾಗಿದೆ.
ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಹಲುವಾಗಲು ಠಾಣೆಯಲ್ಲಿ ದಾಖಲಾಗಿತ್ತು. ಇತ್ಯಾದಿ ಆರೋಪಗಳೊಂದಿಗೆ ಸಲ್ಲಿಕೆಯಾದ ದೂರಿನ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕಾಂತರಾಜು ಅಮಾನತು ಆದೇಶ ಹೊರಡಿಸಿದ್ದಾರೆ.