ಸಿಲಿಕಾನ್ ಸಿಟಿಯಲ್ಲಿ ಸ್ವಂತ ಸೂರು ನಿರ್ವಿುಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ವಸತಿ ಇಲಾಖೆ ವಿವಿಧ ಯೋಜನೆಗಳಲ್ಲಿ ಅನುದಾನ ನೀಡಲು ಮುಂದಾಗಿದೆ. ಈಗಾಗಲೇ ಸಾಕಷ್ಟು ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ವಸತಿ ಇಲಾಖೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ), ಡಿ. ದೇವರಾಜ ಅರಸು ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಸೇರಿ ಹಲವು ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಂತ ವಸತಿ ಕಲ್ಪಿಸಲು ಅನುದಾನ ನೀಡಿ ಸ್ವಂತ ಸೂರಿನ ಅವರ ಕನಸನ್ನು ನನಸು ಮಾಡುತ್ತಿದೆ.
ಪಿಎಂಎವೈ ಅಡಿ ಬೆಂಗಳೂರಿನಲ್ಲಿ ಈಗಾಗಲೇ 1,28,375 ಕುಟುಂಬಗಳನ್ನು ಆಯ್ಕೆ ಮಾಡಿರುವ ಇಲಾಖೆ, ಪ್ರತಿ ಕುಟುಂಬಕ್ಕೆ 1.20 ರಿಂದ 1.50 ಲಕ್ಷ ರೂ. ಅನುದಾನ ಒದಗಿಸುತ್ತಿದೆ. 2022ರಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ.
ಸಾಕಷ್ಟು ಜನರಿಗೆ ಅನುಕೂಲ
ನಿವೇಶನ ಹಾಗೂ ಮನೆ ಎರಡನ್ನೂ ಹೊಂದಿರದ ಜನರಿಗೆ ಕೆಲ ಯೋಜನೆಗಳಲ್ಲಿ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಿ, ಪ್ರತ್ಯೇಕ ಅನುದಾನ ಒದಗಿಸಲಾಗುತ್ತದೆ. ಹೆಚ್ಚಿನ ಯೋಜನೆಗಳಲ್ಲಿ ನಿಗಮದಲ್ಲಿ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳ ಖಾತೆಗೆ ಅನುದಾನವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ಇದೀಗ ಸಾಕಷ್ಟು ಕುಟುಂಬಗಳು ಅನುದಾನ ಪಡೆದಿದ್ದು, ಬಾಕಿ ಇರುವ ಮನೆಗಳಿಗೆ ಅನುದಾನ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ ಹಂತ-ಹಂತವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಅನುದಾನ ಜಮೆ ಆಗುವುದರಿಂದ ಇದರಲ್ಲಿ ಇಲಾಖೆಯ ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲ. ಈ ಯೋಜನೆಯ ಲಾಭ ಪಡೆಯಲು ಅಲೆದಾಡಬೇಕಿಲ್ಲ. ನಿಗಮದ ಅನುಮೋದನೆ ಪಡೆದ ದಿನಾಂಕದಿಂದ ಮೂರು ತಿಂಗಳೊಳಗಾಗಿ ತಳಪಾಯ ಹಂತದ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಯನ್ನು ಆನ್ಲೈನ್ಗೆ ಅಳವಡಿಸಬೇಕು. ನಾಲ್ಕು ಹಂತಗಳಲ್ಲಿ ಶೇ.25 ಪ್ರಮಾಣದಲ್ಲಿ ಅನುದಾನ ಮಂಜೂರಾಗಲಿದೆ.
ಭೌತಿಕ ಪ್ರಗತಿ ವೆಬ್ಸೈಟ್ಗೆ
ಫಲಾನುಭವಿಗಳು ಕಾಮಗಾರಿ ಆದೇಶ ಪಡೆದ ನಂತರ ಮನೆ ನಿರ್ಮಾಣ ಕಾರ್ಯ ಮಾಡಬೇಕಾಗುತ್ತದೆ. ಮೂರು ತಿಂಗಳೊಳಗೆ ಫಲಾನುಭವಿಯು ತಳಪಾಯ ಹಂತವನ್ನು ಪೂರ್ಣಗೊಳಿಸಿ, ಪಿಡಿಒ ಮೂಲಕ ಈ ಹಂತದ ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಯನ್ನು ನಿಗಮದ ವೆಬ್ಸೈಟ್ಗೆ ಅಳವಡಿಸಬೇಕು.