ಹೊಳೆಆಲೂರ: ಇಪ್ಪತ್ತೆಂಟು ಗ್ರಾಮಗಳ ಹೋಬಳಿಯ ಕೇಂದ್ರ ಸ್ಥಾನವಾಗಿರುವ ಗ್ರಾಮವು 12 ಸಾವಿರ ಜನಸಂಖ್ಯೆ ಹೊಂದಿದೆ. ಇಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ಆದರೆ, ಸೂಕ್ತ ವಸತಿ ವ್ಯವಸ್ಥೆ ಕೊರತೆಯಿಂದ ಈ ಭಾಗದ ನೂರಾರು ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಪಟ್ಟಣದ ಒಂದು ಪದವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 313 ವಿದ್ಯಾರ್ಥಿಗಳು, ಎರಡು ಪದವಿಪೂರ್ವ ಕಾಲೇಜುಗಳಲ್ಲಿ 238 ವಿದ್ಯಾರ್ಥಿಗಳು, ಎರಡು ಐಟಿಐ ಹಾಗೂ ಡಿಪ್ಲೊಮಾ ಕಾಲೇಜಿನಲ್ಲಿ 148 ವಿದ್ಯಾರ್ಥಿಗಳು, ಒಂದು ತಾಂತ್ರಿಕ (ಇಂಜಿನಿಯರಿಂಗ್) ಕಾಲೇಜಿನಲ್ಲಿ 79 ವಿದ್ಯಾರ್ಥಿಗಳು ಸೇರಿ ಒಟ್ಟು 778 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇನ್ನು ಒಂದು ಅಂಧ ಮಕ್ಕಳ ಸಂಗೀತ ಶಾಲೆ ಹಾಗೂ 5 ಪ್ರೌಢ ಶಾಲೆ, 8 ಪ್ರಾಥಮಿಕ ಶಾಲೆಗಳಲ್ಲಿ ಗ್ರಾಮೀಣ ಭಾಗಗಳ ನೂರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಥವಾ ಹಿಂದುಳಿದ ವರ್ಗದ ಇಲಾಖೆಯಿಂದ ವಸತಿ ನಿಲಯದ ಭಾಗ್ಯ ಇಲ್ಲದಿರುವುದರಿಂದ ಗ್ರಾಮದ ಖಾಸಗಿ ಮನೆಗಳಲ್ಲಿ ದುಬಾರಿ ಬಾಡಿಗೆ ತೆತ್ತು ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರಿ ಕೋಟಾದಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜು (ಇಂಜಿನಿಯರಿಂಗ್) ಉಚಿತ ಸೀಟು ಸಿಕ್ಕರೂ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ.
ಯಾವುದಾದರೂ ಇಲಾಖೆಯ ವತಿಯಿಂದ ವಸತಿ ನಿಲಯ ಒದಗಿಸಬೇಕು ಎಂದು ಸ್ಥಳೀಯ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಹೊಳೆಆಲೂರ ಹೋಬಳಿಯ 28 ಗ್ರಾಮಗಳು ಆಡಳಿತ ದೃಷ್ಟಿಯಿಂದ ರೋಣ ತಾಲೂಕು, ಗದಗ ಜಿಲ್ಲೆಗೆ ಬರುತ್ತವೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ನರಗುಂದ ಮತಕ್ಷೇತ್ರಕ್ಕೆ, ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟ ಮತಕ್ಷೇತ್ರಕ್ಕೆ ಇಲ್ಲಿನ ಜನ ಮತ ಚಲಾಯಿಸುವುದರಿಂದ ಜನಪ್ರತಿನಿಧಿಗಳು ಆಸಕ್ತಿವಹಿಸುತ್ತಿಲ್ಲ ಎನ್ನಲಾಗುತ್ತಿದೆ.
ಸೋಮನಕಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಬಾರ್ಡ್ ಯೋಜನೆಯಲ್ಲಿ ಎರಡು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ಅಡುಗೆ ಕೋಣೆ, ಊಟದ ಕೊಠಡಿ, ಮಕ್ಕಳ ವಾಸಕ್ಕೆ 25 ಕೊಠಡಿಗಳು, 6 ಶೌಚಗೃಹಗಳು, ಗ್ರಂಥಾಲಯ, ವಿಶಾಲವಾದ ಆಟದ ಮೈದಾನ ಹೊಂದಿದ್ದು, ಸುಮಾರು 120 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬಹುದಾಗಿದೆ. ವಸತಿ ನಿಲಯಕ್ಕೆ ಕಟ್ಟಡ ಬಿಟ್ಟುಕೊಡಲು ಪ್ರಾಚಾರ್ಯ ವಿನೋದಕುಮಾರ ಸೋನಾರ್ ಅವರು ಒಪ್ಪಿದ್ದಲ್ಲದೆ, ತಾಲೂಕು ಮತ್ತು ಜಿಲ್ಲಾ ಇಲಾಖೆಗೆ ಪತ್ರ ಬರೆದಿದ್ದಾರೆ. ಸಂಬಂಧಿಸಿದ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ವಸತಿ ನಿಲಯ ಮಂಜೂರು ಮಾಡಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಗಜೇಂದ್ರಗಡ, ಹೊಳೆಆಲೂರಿಗೆ ತಲಾ 1, ನರೇಗಲ್ಲ ಪಟ್ಟಣಕ್ಕೆ ಎರಡು ವಸತಿ ನಿಲಯ ಮಂಜೂರು ಮಾಡುವಂತೆ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೋಣ ಹಾಗೂ ನರಗುಂದ ಶಾಸಕರ ಗಮನಕ್ಕೂ ತರಲಾಗಿದೆ.ಮಲ್ಲಿಕಾರ್ಜುನ ಹನಸಿ, ತಾಲೂಕು ಹಿಂದುಳಿದ ವರ್ಗದ ಇಲಾಖೆಯ ನಿರ್ದೇಶಕವಸತಿ ನಿಲಯ ಮಂಜೂರು ಮಾಡುವಂತೆ ಎಸ್‌ಸಿ, ಎಸ್‌ಟಿ ವತಿಯಿಂದ ಬಿ.ಆರ್. ಯಾವಗಲ್ಲ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಶಿವರಾಜ ತಂಗಡಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.ಪ್ರಕಾಶ ಭಜಂತ್ರಿ, ಜಿಲ್ಲಾ ಎಸ್‌ಸಿ ಘಟಕದ ಉಪಾಧ್ಯಕ್ಷ