ಶಿವಮೊಗ್ಗ: ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ನಿರ್ಮಾಣಗೊಂಡಿರುವ ಆಶ್ರಯ ಮನೆಗಳ ಹಂಚಿಕೆಗೆ ಜ.28ರಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಶಿವಮೊಗ್ಗಕ್ಕೆ ಆಗಮಿಸುವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.
ಪಿಎಂ ಆಶ್ರಯ ಯೋಜನೆಯಡಿ ಈಗಾಗಲೇ ನಿರ್ಮಾಣಗೊಂಡಿರುವ 652 ಮನೆಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಸತಿ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ಅಲ್ಲಿನ ಮನೆಗಳಿಗೆ ನೀರು ಹಾಗೂ ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಚರ್ಚೆ ನಡೆಸಲಾಗಿತ್ತು. ಜ.18ರಂದು ಹಸ್ತಾಂತರ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ಜ.28ಕ್ಕೆ ಶಿವಮೊಗ್ಗಕ್ಕೆ ಬರುವುದಾಗಿ ವಸತಿ ಸಚಿವರು ಒಪ್ಪಿಕೊಂಡಿದ್ದು ಅವರ ಸಮ್ಮುಖದಲ್ಲಿ 652 ಮನೆಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.